ಬೆಂಗಳೂರು: ಗದ್ದುಗೆ ಗುದ್ದಾಟದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಮುನಿಸು ತೀವ್ರ ಸ್ವರೂಪಕ್ಕೆ ತಿರುಗಿದ್ದು, ಇಂದು ಬಹಿರಂಗವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ, ಮಕ್ಕಳ ದಿನಾಚರಣೆ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಅಕ್ಕ ಪಡೆಗೆ ಚಾಲನೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣ ಆರಂಭಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲೇ ಬಂದು ಭಾಗವಹಿಸಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಷಣ ಆರಂಭಿಸಿದಾಗ ತಡವಾಗಿ ಬಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಮೂಹಿಕವಾಗಿ ಎಲ್ಲರಿಗೂ ಕೈ ಮುಗಿಯುತ್ತ ಪ್ರೇಕ್ಷಕರತ್ತ ತಿರುಗಿ ಕೈ ಬೀಸಿದರು.
ವೇದಿಕೆಯಲ್ಲಿದ್ದ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಮತ್ತು ಇತರ ಮಹಿಳಾ ಗಣ್ಯರಿಗೆ ಹಸ್ತಲಾಘವ ನೀಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರತ್ತ ನೋಡುತ್ತಲಿದ್ದರಾದರೂ, ಅದನ್ನು ಕಂಡೂ ಕಾಣದಂತೆ ಡಿ.ಕೆ.ಶಿವಕುಮಾರ್ ವರ್ತಿಸಿದರು. ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಒಂದು ಹಂತದಲ್ಲಿ ಅರೆ ಮನಸ್ಸಿನಿಂದ ಮುಖ್ಯಮಂತ್ರಿ ಅವರತ್ತ ಕಣ್ಣು ಹಾಯಿಸಲು ಡಿ.ಕೆ.ಶೀವಕುಮಾರ್ ಮನಸ್ಸು ಮಾಡಿದ್ದರಾದರೂ, ಆ ರೀತಿ ಮಾಡದೇ ತಮ್ಮ ಪಾಡಿಗೆ ಕುಳಿತರು.
ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸದೇ ಇರುವುದನ್ನು ಕಂಡ ಸಿದ್ದರಾಮಯ್ಯ ತಮ್ಮ ಪಾಡಿಗೆ ತಾವು ಆಹ್ವಾನಪತ್ರ ಮತ್ತು ಅದರಲ್ಲಿದ್ದ ಮಾಹಿತಿಗಳನ್ನು ಓದಲಾರಂಭಿಸಿದರು. ಇದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕಂದಕ ನಿರ್ಮಾಣವಾಗಿರುವುದನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿತು.



