ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಅತಿಯಾದ ತೂಕ ಮತ್ತು ಬೊಜ್ಜು ಹೊಂದಿದ್ದ 65 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 28 ದಿನಗಳ ಆರೋಗ್ಯ ಫಿಟ್ನೆಸ್ ತರಬೇತಿ ನೀಡಲಾಗಿದ್ದು, ಬಹುತೇಕರು 4ರಿಂದ 11 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಜುಲೈ 7ರಂದು ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರವನ್ನು ಭೇಟಿ ನೀಡಿ ಮಾತನಾಡಿದ ಅವರು, “ಮೊದಲ ಹಂತದ ಶಿಬಿರದಲ್ಲಿ 400 ಕೆಜಿಗೂ ಹೆಚ್ಚು ಒಟ್ಟು ತೂಕ ಇಳಿಕೆ ಸಾಧ್ಯವಾಯಿತು. ಇದು ಪೊಲೀಸ್ ಇಲಾಖೆಯ ದೈಹಿಕ ಚುರುಕುತನವನ್ನು ದೃಢಪಡಿಸುತ್ತದೆ” ಎಂದು ಹೇಳಿದರು.
ದೈನಂದಿನ ಕರ್ತವ್ಯ ನಿರ್ವಹಣೆಗೆ ದೈಹಿಕ ಸದೃಢತೆ ಅತ್ಯಂತ ಅಗತ್ಯ. ನೇಮಕಾತಿಯ ಸಮಯದಲ್ಲಿ ತೂಕ, ಎತ್ತರ, ಶಕ್ತಿಶಾಲಿತೆಯನ್ನು ಪರೀಕ್ಷೆ ಮಾಡಲಾಗುತ್ತದೆ. ಆದರೆ ಕರ್ತವ್ಯಕ್ಕೆ ಸೇರಿದ ಬಳಿಕ ಕೆಲವರು ಫಿಟ್ನೆಸ್ ಕಡೆಗಣಿಸಿ ಬೊಜ್ಜಾಗುತ್ತಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್‌ನಿಗೂ ಒಳಗಾಗುತ್ತಾರೆ. ಆದರೂ, ಶೇ. 90ರಷ್ಟು ಸಿಬ್ಬಂದಿ ದೈಹಿಕವಾಗಿ ಫಿಟ್ ಆಗಿದ್ದಾರೆ ಎಂದರು.
ಈ ಶಿಬಿರದಲ್ಲಿ 90 ಕೆಜಿಗೂ ಮೇಲ್ಪಟ್ಟ ಪುರುಷರು ಹಾಗೂ 70 ಕೆಜಿಗೂ ಮೇಲ್ಪಟ್ಟ ಮಹಿಳಾ ಸಿಬ್ಬಂದಿಯನ್ನು ಗುರುತಿಸಿ ತರಬೇತಿಗೆ ಒಳಪಡಿಸಲಾಯಿತು. ಮೊದಲು ಅಸಡ್ಡೆ ತೋರಿದ ಕೆಲವರು, ನಂತರ ಉತ್ಸಾಹದಿಂದ ಭಾಗವಹಿಸಿದರು. ಖರ್ಚನ್ನು ಸಿಬ್ಬಂದಿಯೇ ಹೊತ್ತಿದ್ದು, 40 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಭಾಗವಹಿಸಿದರು.
ಎಎಸ್‌ಐ ಮೋಹನ್ ಕುಲಕರ್ಣಿ 11 ಕೆಜಿ, ಹೆಡ್ ಕಾನ್ಸಟೇಬಲ್ ರವಿ ಹೊಸಮನಿ ಮತ್ತು ಬಸವರಾಜ ಬೆಳಗಾವಿ ತಲಾ 9 ಕೆಜಿ, ಹಾಗೂ ಮಹಿಳಾ ಎಎಸ್‌ಐ ದಿಲಶಾದ್ ಮುಲ್ಲಾ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ವಾಕಿಂಗ್, ಯೋಗ, ಡ್ರಿಲ್, ಆರೋಗ್ಯಕರ ಆಹಾರ ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ತರಬೇತಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಬ್ಬಂದಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಸಹ ಶಿಬಿರ ಆಯೋಜಿಸುವ ಯೋಜನೆಯಿದೆ ಎಂದು ಆಯುಕ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಯಲ್ಲಪ್ಪ ಕಾಶಪ್ಪನವರ ಸೇರಿದಂತೆ ಇನ್ಸಪೆಕ್ಟರ್‌ಗಳು ಇತರರಿದ್ದರು.