ಹುಬ್ಬಳ್ಳಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಪತ್ನಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಎಪಿಎಂಸಿ-ಮಾರಡಗಿ ರೋಡ್ ನಲ್ಲಿ ನಡೆದಿದೆ.
ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ (40) ಕೊಲೆಯಾದ ವ್ಯಕ್ತಿ. ಪತ್ನಿ ಮಂಜುಳಾ ಮತ್ತು ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿ ಜೈಲು ಸೇರಿದ ಪ್ರೇಮಿಗಳು.
ಜನವರಿ 10 ರಂದು ಎಪಿಎಂಸಿ ಮಾರಡಗಿ ರೋಡ್ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ನವನಗರ ಪೊಲೀಸರು ಮೃತನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಇತ್ತ ಪತ್ನಿ ಮಂಜುಳಾ ಗಂಡನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ನವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ನವನಗರ ಪೊಲೀಸರು ಎಲ್ಲಾ ಆಯಾಮಗಳಲ್ಲು ತನಿಖೆ ನಡೆಸಿ ಸತ್ಯಾಂಶ ಹೊರ ತಂದಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಚಂದ್ರಶೇಖರ ಲಮಾಣಿ ಪತ್ನಿ ಮಂಜುಳಾ ಮೇಲೆ ಸಂಶಯ ವ್ಯಕ್ತವಾಗಿ ವಿಚಾರಣೆ ನಡೆಸಿದ್ದಾರೆ. ಆಗ ಮಂಜುಳಾ, ಕಳೆದ ಐದು ವರ್ಷಗಳಿಂದ ರಿಯಾಜ್ ಅಹ್ಮದ್ ಮತ್ತು ನನ್ನ ನಡುವೆ ಅನೈತಿಕ ಸಂಬಂಧ ಇತ್ತು. ಇದಕ್ಕೆ ಪತಿ ಚಂದ್ರಶೇಖರ ಲಮಾಣಿ ವಿರೋಧ ಮಾಡುತ್ತಿದ್ದನು. ಅಲ್ಲದೆ ನನಗೆ ಕಿರುಕುಳ ನೀಡಲು ಆರಂಭಿಸಿದ್ದನು. ಈ ವಿಚಾರವನ್ನು ಪ್ರಿಯಕರ ರಿಯಾಜ್ ಅಹ್ಮದ್ ಗೆ ಹೇಳಿದ್ದೆ. ಆಗ ಪ್ರಿಯಕರ ರಿಯಾಜ್ ಅಹ್ಮದ್ ಚಂದ್ರಶೇಖರನನ್ನು ಕೊಲೆ ಮಾಡಿದ್ದಾನೆ ಎಂದು ಮಂಜುಳಾ ಸತ್ಯ ಹೇಳಿದ್ದಾಳೆ.