ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿರುವ ಘಟನೆ ವರದಿಯಾಗಿದೆ.
ಮಳೆ ಆರಂಭಕ್ಕೆ ತಡವಾದ ಹಿನ್ನೆಲೆ ಪೂರ್ವಜರ ನಂಬಿಕೆಯಲ್ಲಿ ವಿಶ್ವಾಸವಿಟ್ಟ ಗ್ರಾಮಸ್ಥರಿಂದ ಕಪ್ಪೆಗಳಿಗೆ ಮದುವೆ ಮಾಡಿಸಲಾಗಿದೆ.
ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುತ್ತೈದೆಯರು ಉಡಿ ತುಂಬಿದ್ದು, ಕಪ್ಪೆಗಳಿಗೆ ಅರಿಶಿನ ಹಚ್ಚಿ, ಸುರಗಿ ನೀರೇರೆದು, ಹಾಸಕ್ಕಿ ಹಾಕಿ, ಕಪ್ಪೆಗಳಿಗೆ ತಾಳಿ ಕಟ್ಟಿಸಿದ್ದಾರೆ. ‘ಮಳೆರಾಯ ಬೇಗ ಬಾ’ ಎಂದು ಪ್ರಾರ್ಥಿಸಿದ್ದಾರೆ.
ಅರಿಶಿನಶಾಸ್ತ್ರ, ಹಂದರ ಶಾಸ್ತ್ರ, ವಿವಿಧ ವಾದ್ಯ ಮೇಳಗಳೊಂದಿಗೆ ಕಪ್ಪೆಗಳನ್ನು ಗ್ರಾಮದಲ್ಲಿ ಮೆರವಣಿಗೆ ಕೂಡ ಮಾಡಲಾಗಿದೆ. ಬಳಿಕ ಭಕ್ತರಿಗೆ ಅನ್ನ ಪ್ರಸಾದವನ್ನು ಏರ್ಪಡಿಸಿದ್ದಾರೆ.