ಮಂಗಳೂರು(ದಕ್ಷಿಣ ಕನ್ನಡ): ಆಸ್ತಿ ತೆರಿಗೆ ಭಾರೀ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷವಾದ ಕಾಂಗ್ರೆಸ್ ಸದಸ್ಯರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಕಾರಣ ಸಭೆಯಲ್ಲಿ ಗದ್ದಲ ಸೃಷ್ಟಿಯಾಗಿ, ಉತ್ತರ ನೀಡಲು ಸಾಧ್ಯವಾಗದೆ ಮೇಯರ್ ಎರಡೆರಡು ಬಾರಿ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಿ ನಿರ್ಲಿಪ್ತರಾಗಿ ಎದ್ದುಹೋದ ಪ್ರಸಂಗ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆ ಬೆಳಗ್ಗೆ 10.30ಕ್ಕೆ ನಿಗದಿಯಾಗಿತ್ತು. ಅದರಂತೆ ನಾಡಗೀತೆಯೊಂದಿಗೆ ಸಭೆ ಆರಂಭಗೊಂಡು ಹಿಂದಿನ ಸಭೆಯ ನಿರ್ಣಯಗಳನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸ್ಥಿರೀಕರಣಗೊಳಿಸುವ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯೆ ಸಂಗೀತ ಆರ್. ನಾಯಕ್ ಅವರು ಆಸ್ತಿ ತೆರಿಗೆ ವಿಚಾರ ಪ್ರಸ್ತಾಪಿಸಲು ಮುಂದಾದರು.
ಈ ಸಂದರ್ಭ ಪ್ರತಿಪಕ್ಷವಾದ ಕಾಂಗ್ರೆಸ್‌ನ ಸದಸ್ಯರು ಕೈಯ್ಯಲ್ಲಿ ‘ತೆರಿಗೆ ಇಳಿಸಿ’, ‘ಸಾರ್ವಜನಿಕರಿಗೆ ಹೊರೆಯಾಗುವ ತೆರಿಗೆ ಇಳಿಸಿ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಮೇಯರ್ ಪೀಠದೆದುರು ತೆರಳಿ ಘೋಷಣೆ ಕೂಗಿದರು.
ಬಿಜೆಪಿ ಸದಸ್ಯರನೇಕರು ಈ ಸಂದರ್ಭ ಕಾಂಗ್ರೆಸ್ ಸದಸ್ಯರು ರಾಜಕೀಯ ಮಾಡುತ್ತಿದ್ದಾರೆಂದು ತಮ್ಮ ಆಸನದ ಮೈಕ್‌ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪರಸ್ಪರ ಸದಸ್ಯರು ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಗದ್ದಲ ವಾತಾವರಣದ ನಡುವೆ, ಸಭೆ ನಿಯಂತ್ರಿಸಲಾಗದೆ, ಲಾಂಗ್ ಬೆಲ್ ಪ್ರೆಸ್ ಮಾಡಿ ಮೇಯರ್ ಏನೂ ಹೇಳದೆ ಸದನದಿಂದ ಹೊರ ನಡೆದರು.