ಬೆಂಗಳೂರು : ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ವಿಮಾ ಪರಿಹಾರಕ್ಕೆ ಅರ್ಹ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಪತ್ನಿಯ ಅವಲಂಬಿತರ ಆಧಾರದಲ್ಲಿ ಮೋಟಾರು ವಾಹನ ಕಾಯ್ದೆಯಡಿ ನಷ್ಟ ಪರಿಹಾರ ಪಡೆಯಲು ಪತಿ-ಪತ್ನಿ ಒಟ್ಟಾಗಿ ನೆಲೆಸಿರಬೇಕು ಎಂಬುದಾಗಿ ಹೆಚ್ಚುವರಿ ಷರತ್ತು ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ರಸ್ತೆ ಅಪಘಾತದಲ್ಲಿ ಪತ್ನಿ ಮರಣಹೊಂದಿದ ಬಳಿಕ ಅವಲಂಬಿತರ ನಷ್ಟ ಪರಿಹಾರ ಕೋರಿ ಸಲ್ಲಿಸಿದ್ದ ಮನವಿ ನಿರಾಕರಿಸಿದ್ದ ಮೋಟಾರು ಅಪಘಾತಗಳ ನ್ಯಾಯಾಧೀಕರಣದ ಕ್ರಮ ಪ್ರಶ್ನಿಸಿ ಮೃತರ ಪತಿ ನಿಂಗಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ಪೀಠ, ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ವಿಮಾ ಪರಿಹಾರಕ್ಕೆ ಅರ್ಹ ಎಂದು ತಿಳಿಸಿದೆ.
ಪ್ರಕರಣದಲ್ಲಿ ಮೃತ ಮಹಿಳೆ ಹಾಗೂ ಅರ್ಜಿದಾರರು ದಂಪತಿ ಎಂಬುದನ್ನು ದಾಖಲೆಗಳು ಖಾತ್ರಿಪಡಿಸುತ್ತವೆ. ಹೀಗಿರುವಾಗ ಅರ್ಜಿದಾರ ಸಾಂಪ್ರದಾಯಿಕ ಆಧಾರದಲ್ಲಿ ಮಾತ್ರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಬದಲಾಗಿ ನಷ್ಟದ ಪರಿಹಾರವಾಗಿ ಅಲ್ಲ ಎಂದು ನ್ಯಾಯಮಂಡಳಿ ಹೇಳಿದ್ದು, ವಿಮಾದಾರರು ಮೊತ್ತವನ್ನು ಪಾವತಿಸಲು ಬಾಧ್ಯಸ್ಥರು ಎಂದು ತಿಳಿಸಿ ಅರ್ಜಿದಾರರು 14,96,250 ರೂ. ಪರಿಹಾರವನ್ನು ಶೇ.6ರ ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿದ್ದು, ಆದೇಶ ಪ್ರತಿ ಸಿಕ್ಕ 6 ವಾರಗಳಲ್ಲಿ ಪರಿಹಾರ ಮೊತ್ತ ಠೇವಣಿ ಇಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.