ತುಮಕೂರು: ಕಳೆದ ಒಂದು ವರ್ಷದಿಂದ ಪತಿ ನಾಪತ್ತೆಯಾಗಿದ್ದು, ಕಂಗಾಲಾದ ಪತ್ನಿ ತನ್ನ 9 ತಿಂಗಳ ಹಸುಗೂಸಿನೊಂದಿಗೆ ಗಂಡನ ಮನೆ ಮುಂದೆ ಧರಣಿ ಕುಳಿತಿರುವ ಘಟನೆ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಅಪ್ಪಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಂದ್ರಶೇಖರ್ ಎಸ್ಕೇಪ್ ಆದ ಪತಿರಾಯ.
ಪತ್ನಿ ಶೋಭಾ ಸೀಮಂತ ಮುಗಿಸಿಕೊಂಡು ತವರು ಮನೆಗೆ ತೆರಳಿದ ಬಳಿಕ ಪತಿ ಚಂದ್ರಶೇಖರ್ ನಾಪತ್ತೆಯಾಗಿದ್ದಾನೆ. ಪತ್ನಿಗೆ ಮಗು ಜನಿಸಿದರೂ ಕೂಡ ಮಗುವನ್ನು ನೋಡಲು ಪತಿ ಹೋಗಿಲ್ಲ. ಇದರಿಂದ ಆತಂಕಗೊಂಡ ಶೋಭಾ ಗಂಡನ ಮನೆಗೆ ಆಗಮಿಸಿದ್ದಾಳೆ. ಆದರೆ ಅತ್ತೆ ಮಾವ ಶೋಭಾಳನ್ನ ಮನೆಯೊಳಗೆ ಬಿಟ್ಟುಕೊಳ್ಳದೇ ಮನೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.

ಚಂದ್ರಶೇಖರ್ ಉಪನ್ಯಾಸಕನಾಗಿದ್ದು, ಶೋಭ ಎಂಟೆಕ್ ಪದವೀಧರೆಯಾಗಿದ್ದಾಳೆ. ಕಳೆದ ಒಂದು ವರ್ಷದಿಂದ ಪತಿ ಚಂದ್ರಶೇಖರ್ ಕಣ್ಮರೆಯಾಗಿದ್ದು, ಮಹಿಳಾ ಸಾಂತ್ವನ ಕೇಂದ್ರ ಹಾಗೂ ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಕೂಡ ಪ್ರಯೋಜನವಾಗಿಲ್ಲ.
ಇದರಿಂದ ಕಂಗಾಲಾದ ಶೋಭಾ ತನ್ನ 9 ತಿಂಗಳ ಹಸುಗೂಸಿನೊಂದಿಗೆ ಗಂಡನ ಮನೆ ಮುಂದೆ ಧರಣಿ ಕುಳಿತಿದ್ದು, ಶೋಭಾಗೆ ತಂದೆ ತಾಯಿ ಸಾಥ್ ನೀಡಿದ್ದಾರೆ. ತನ್ನ ಪತಿ ಸಿಗುವವರೆಗೂ ಧರಣಿಯಿಂದ ಮೇಲೇಳಲ್ಲ ಎಂದು ಪಟ್ಟು ಹಿಡಿದಿದ್ದಾಳೆ.