ಮೈಸೂರು : ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ. ಐದು ವರ್ಷ ಅವಧಿ ಪೂರ್ಣಗೊಳಿಸುವ ವಿಶ್ವಾಸವೂ ಇದೆ. ಆದರೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಖಲೆಗಳನ್ನು ಮುರಿಯಬೇಕೆಂದು ತಾವು ರಾಜಕೀಯ ಮಾಡಿಲ್ಲ. ಎಲ್ಲವೂ ಕಾಕತಾಳಿಯ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ಅವರು ಎಷ್ಟು ದಿನ ಆಡಳಿತ ನಡೆಸಿದ್ದರು ಎಂಬುದು ಗೊತ್ತಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ್ ಅರಸು ಅವರ ದಾಖಲೆಯನ್ನು ಮೀರುವ ಅವಕಾಶ ನನಗೆ ಸಿಕ್ಕಿದೆ ಎಂದರು.
ಇನ್ನೂ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುವ ಬಗ್ಗೆ ಹೈಕಮಾಂಡ್ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುವ ವಿಶ್ವಾಸ ಇದೆ. ತಮಗೆ ಹೈಕಮಾಂಡ್ ಮೇಲೆ ವಿಶ್ವಾಸ ಇದೆ ಇಲ್ಲದೆ ಹೋಗಿದ್ದರೆ ಮುಖ್ಯಮಂತ್ರಿಯಾಗಿ ಹೇಗೆ ಇರುತಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಧಿಕಾರವಧಿ ಪೂರ್ಣಗೊಳಿಸುವುದು ಹೈಕಮಾಂಡ್ ನಿರ್ಧಾರದ ಮೇಲೆ ಅವಲಂಬಿತವಾಗಿದ್ದು, ತಾವು ಹೆಚ್ಚಿನ ಅಧಿಕಾರವಧಿ ನಡೆಸಿದ ದಾಖಲೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಎಲ್ಲೆಡೆ ನಾಟಿ ಕೋಳಿ ಔತಣ ಕೂಟ ಆಯೋಜಿಸುತ್ತಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಯಾರು ಎಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.
ತಾವು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವರಾಗಿದ್ದು, ಹಳ್ಳಿಗಳ ಕಡೆ ನೆಂಟರು ಬಂದಾಗ ನಾಟಿ ಕೋಳಿ ಊಟ ಮಾಡಲಾಗುತ್ತಿತ್ತು. ನನಗೆ ರಾಗಿಮುದ್ದೆ, ನಾಟಿ ಕೋಳಿ ಮೊದಲು ತುಂಬಾ ಇಷ್ಟವಾಗುತ್ತಿತ್ತು. ಈಗ ಇಲ್ಲ ಎಂದರು. ಗ್ರಾಮೀಣ ಭಾಗದ ಎಲ್ಲರಿಗೂ ನಾಟಿ ಕೋಳಿ ಇಷ್ಟವಾಗುತ್ತದೆ. ನಾನು ಮುಖ್ಯಮಂತ್ರಿ ಆಗಿರುವುದರಿಂದ ನನ್ನ ಇಷ್ಟ-ಕಷ್ಟಗಳು ಹೆಚ್ಚು ಚರ್ಚೆಯಾಗುತ್ತಿವೆ ಎಂದು ಹೇಳಿದರು.
ಸುದೀರ್ಘ ರಾಜಕಾರಣದಲ್ಲಿನ ಸೇವೆ ತಮಗೆ ತೃಪ್ತಿ ತಂದಿದೆ. ಜನರ ಕೆಲಸ ಮಾಡುವುದೇ ಖುಷಿ. ರಾಜಕಾರಣ ಎಂದರೆ ಬಡವರು, ಹಿಂದುಳಿದವರು, ದಲಿತರು ರೈತರಿಗೆ ನ್ಯಾಯ ಕೊಡಿಸುವುದು. ಜನರ ಆಶೀರ್ವಾದದಿಂದ ಅವಕಾಶ ಸಿಕ್ಕಿದೆ. ಸಮಾಜದಲ್ಲಿ ಅಸಮಾನತೆ ಇದೆ ಜನರಿಗೆ ನ್ಯಾಯ ಸಿಗುವವರೆಗೂ, ಅಸಮಾನತೆ ಹೋಗುವವರೆಗೂ ನಾವು ಹೋರಾಟ ಮುಂದುವರಿಸಲಿದ್ದು, ಜನರ ಕೆಲಸ ಮಾಡುವುದಾಗಿ ಹೇಳಿದರು.
ಇನ್ನೂ ನಾನು ಮುಖ್ಯಮಂತ್ರಿಯಾಗಿ ಹೆಚ್ಚು ಅವಧಿ ಆಡಳಿತ ನಡೆಸಿ ದಾಖಲೆ ನಿರ್ಮಿಸುತ್ತೇನೆ ಎಂದು ಕೊಂಡಿರಲಿಲ್ಲ. ಹೆಚ್ಚೆಂದರೆ ಒಂದು ಅವಧಿಗೆ ಶಾಸಕನಾಗಬೇಕು ಎಂಬ ಆಸೆಯಿತ್ತು, ಶಾಸಕನಾದೆ ಅವಕಾಶ ಸಿಕ್ಕಾಗ ಸಚಿವನಾದೆ, ಉಪಮುಖ್ಯಮಂತ್ರಿಯಾಗಿ, ಕೊನೆಗೆ ಮುಖ್ಯಮಂತ್ರಿಯೂ ಆದೆ.
ಈ ನಡುವೆ ವಿರೋಧ ಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ದೇವರಾಜ ಅರಸು ಅವರು ಮೈಸೂರಿನವರು ನಾನು ಮೈಸೂರಿನವನು. ಇಬ್ಬರು ಮುಖ್ಯಮಂತ್ರಿ ಆಗಿರುವುದು ಬೇರೆ ಬೇರೆ ಕಾಲಘಟ್ಟದಲ್ಲಿ. ದೇವರಾಜ್ ಅರಸು 1972 ರಿಂದ 1980ರವರೆಗೂ ಮುಖ್ಯಮಂತ್ರಿ ಆಗಿದ್ದರು. ನಾನು 2013 ರಿಂದ 2018ರ ವರೆಗೂ ಮತ್ತು 2023ರಿಂದ ಈವರೆಗೂ ಮುಖ್ಯಮಂತ್ರಿಯಾಗಿದ್ದೇನೆ. ಮುಂದೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಪುನರುಚ್ಚರಿಸಿದರು.



