ಬೆಂಗಳೂರು: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ, ನಿರ್ಮಾಪಕ-ನಿರ್ದೇಶಕ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಾಧು ಕೋಕಿಲ ಅವರು, ನಾನೊಬ್ಬ ಕಲಾವಿದನಾಗಿರುವರಿಂದ ಎಲ್ಲ ಸಮುದಾಯಗಳ ಜನ ನನ್ನನ್ನು ಇಷ್ಟಪಡುತ್ತಾರೆ. ನಾನು ಯಾವತ್ತೂ ಜನರನ್ನು ತಾರತಮ್ಮ ಭಾವದಿಂದ ನೋಡಿದವನಲ್ಲ, ಎಲ್ಲ ವರ್ಗದವರನ್ನು ಸಮಾನವಾಗಿ ನೋಡುತ್ತೇನೆ ಎಂದರು.
ಚಾಮರಾಜಪೇಟೆ ಮತ್ತು ಶಿವಾಜಿನಗರದಲ್ಲಿರುವ ಕ್ರೈಸ್ತರೆಲ್ಲ ನನಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಒಂದು ವೇಳೆ ಟಿಕೆಟ್ ಸಿಕ್ಕರೆ ಖಂಡಿತ ಗೆಲ್ತೀನಿ ಅನ್ನುವ ಸಾಧು ಕೋಕಿಲ, ಟಿಕೆಟ್ ಆಕಾಂಕ್ಷಿಯಾಗಿರುವುದು ನಿಜವಾದರೂ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.