ಹುಬ್ಬಳ್ಳಿ: ಬಿಜೆಪಿಗೆ ನಾನು ಅಂದರೆ ಭಯ. ನಾನು ಪಕ್ಷ ಬಿಟ್ಟು ಹೋದ ಮೇಲೆ ಏನಾಗಿದೆ ಅನ್ನೋದು ಗೊತ್ತಾಗಿದೆ. ಅದನ್ನು ಇನ್ನೂ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗಿಲ್ಲ ಎಂದು ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್ ಹೇಳಿದರು. ಈದ್ಗಾ ಮೈದಾನದ ಹೋರಾಟದಲ್ಲಿ ಜಗದೀಶ್ ಶೆಟ್ಟರ್ ವಿರುದ್ದವೂ ಬಿಜೆಪಿ ಕಾರ್ಯಕರ್ತರು ದಿಕ್ಕಾರ ಕೂಗಿದ ವಿಚಾರವಾಗಿ ಈ ಹೇಳಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರನ್ನ ವಿಧಾನಸಭೆ ಚುನಾವಣೆಯಲ್ಲಿ ಟಾರ್ಗೆಟ್ ಮಾಡಿದ್ದೀರಿ. ಇವಾಗಲೂ ಟಾರ್ಗೆಟ್ ಯಾಕೆ? ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನನ್ನ ಭಯ ಆರಂಭವಾಗಿದೆ. ಭಯ ಇರುವ ಕಾರಣಕ್ಕೆ ಪದೇಪದೆ ನನ್ನ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ಬಿಜೆಪಿಗೆ ನಷ್ಟ ಹೊರತು ಲಾಭ ಅಲ್ಲ. ಪದೇಪದೆ ಶೆಟ್ಟರ್ ಹೆಸರು ಹೇಳಿದರೆ ನೀವು ಉದ್ಧಾರವೂ ಆಗುವುದಿಲ್ಲ ಎಂದರು.
ಮಹಾದಾಯಿ ಬಗ್ಗೆ ಹೋರಾಟ ಮಾಡಿ, ಮೋದಿ ಬಂದು ಒಂಬತ್ತು ವರ್ಷ ಆಯ್ತು. ಹನಿ ನೀರು ಕೊಡಲು ಇಷ್ಟು ವರ್ಷ ಬೇಕಾ ಎಂದು ಪ್ರಶ್ನಿಸಿದ ಶೆಟ್ಟರ್, ಮಹದಾಯಿ ನೀರು ಕೊಡಿ. ನಿಮ್ಮ ಜನ್ಮ ಸಾರ್ಥಕ ಆಗತ್ತದೆ ಎಂದರು. ಅಲ್ಲದೆ, ಪ್ರತಿ ವರ್ಷ ಕಳಸಾ ಬಂಡೂರಿ ಹೆಸರಲ್ಲಿ ವೋಟ್ ತೆಗೆದುಕೊಳ್ಳುವುದಾ ಮೋದಿ ಅವರಿದ್ದಾಗಲೇ ಕಳಸಾ ಬಂಡೂರಿ ಮುಕ್ತಾಯ ಮಾಡಿ ಎಂದರು.
ಕೆಲವೇ ವ್ಯಕ್ತಿಗಳ ಕೈಯಲ್ಲಿ ಬಿಜೆಪಿ ಇದೆ ಎಂದು ನಾನು ಹೇಳಿದ್ದೆ. ಅದು ಈಗ ಪ್ರೂವ್ ಆಗುತ್ತಿದೆ ಎಂದ ಜಗದೀಶ್ ಶೆಟ್ಟರ್, ವ್ಯಕ್ತಿಯನ್ನು ನೋಡಿ ಟಿಕೆಟ್ ಕೊಡುವ ಪ್ರಕ್ರಿಯೆ ಮೊದಲು ಇತ್ತು. ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೆಟ್ ಕೊಡಿಸಿದ್ದೇನೆ. ರಾಮದುರ್ಗದಲ್ಲಿ ರಿಯಲ್ ಎಸ್ಟೇಟ್ ವ್ಯಕ್ತಿಗೆ ಟಿಕೆಟ್ ಕೊಡುತ್ತಾರೆ. ಏನೋ ವ್ಯವಹಾರ ನಡೆದಿದೆ ಅನ್ನೋದಂತೂ ಸತ್ಯ ಎಂದರು.
ಪ್ರಾಥಮಿಕ ಹಂತದಲ್ಲಿ ವ್ಯವಹಾರ ನಡೆದಿರುವ ಬಗ್ಗೆ ಸಾಬೀತಾಗಿದೆ ಎಂದ ಶೆಟ್ಟರ್, ಚೈತ್ರಾ ಕುಂದಾಪೂರ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಚೈತ್ರಾ ಕುಂದಾಪೂರ ಪ್ರಕರಣ ಹೊರಬರುತ್ತಿದ್ದಂತೆ ಕೆಲವರಿಗೆ ಧೈರ್ಯ ಬಂದಿದೆ ಎಂದರು.