ಬೆಂಗಳೂರು: ರಾಜಣ್ಣ ನನಗೂ ಆಪ್ತರು. ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ನಾನೇ ಅಂತ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ (ಡಿ.20) ಮಾಜಿ ಸಚಿವ ರಾಜಣ್ಣ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಣ್ಣ ನಮ್ಮ ಶಾಸಕರು. ನಮ್ಮ ಜೊತೆ ಮಂತ್ರಿ ಆಗಿದ್ದವರು. ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇವೆ. ಇಂದು (ಡಿ.21) ಕೂಡಾ ಭೇಟಿಯಾಗಿ ಮಾತಾಡ್ತೀನಿ ಅಂತ ಹೇಳಿದ್ದೇನೆ. ನಿನ್ನೆ ಪೂರ್ತಿ ಮಾತಾಡೋಕೆ ಆಗಿಲ್ಲ. ಇವತ್ತು ರಾಜಭವನ ಕಾರ್ಯಕ್ರಮ ಮುಗಿಸಿ, ಭೇಟಿ ಆಗ್ತೀನಿ ಎಂದಿದ್ದಾರೆ.
ಸಿಎಂ ಆಪ್ತ ಬಳಗ ರಾಜಣ್ಣ ಭೇಟಿ ಯಾಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಣ್ಣ ನನಗೆ ಎಷ್ಟು ಆಪ್ತ ಅಂತ ನಿಮಗೆ ಗೊತ್ತಿದೆಯಾ? ಸಿಎಂಗೂ ಅವರಿಗೂ ಸಂಬಂಧವೇ ಇಲ್ಲ. ಎಸ್‌ಎಂ ಕೃಷ್ಣ ಸರ್ಕಾರದಲ್ಲಿ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೆ ನಾನು. ಸಿಎಂ ಜನತಾ ಪಾರ್ಟಿಯಲ್ಲಿ ಇದ್ದರು. ನಾನು ಕಾಂಗ್ರೆಸ್‌ನಲ್ಲಿ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೆ. ರಾಜಣ್ಣಗೆ ಅದು ಗೊತ್ತಿದೆ ಕೇಳಿ. ಅವರೇ ಹೇಳ್ತಾರೆ. ಈಗ ಸಿಎಂ ಮಾತ್ರ ಅಲ್ಲ. ನಮಗೂ ಆಪ್ತರೇ ರಾಜಣ್ಣ ಎಂದು ತಿಳಿಸಿದ್ದಾರೆ.
ರಾಜಕೀಯ ಬೆಂಬಲಕ್ಕೆ ಭೇಟಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವೆಲ್ಲರು ಸಹೋದ್ಯೋಗಿಗಳು. ನಮ್ಮ ಸರ್ಕಾರ, ಪಕ್ಷದಲ್ಲಿ ಕೆಲಸ ಮಾಡಿರೋದು ಅವರು. ನನಗೆ ಯಾರ ಬಗೆಯೂ ಭಿನ್ನಾಭಿಪ್ರಾಯ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಕೆಲವು ಸಮಯದಲ್ಲಿ ಹೇಳಿಕೆಗಳನ್ನು ಕೊಟ್ಟಿರುತ್ತಾರೆ. ಅದಕ್ಕೆ ಬೇಜಾರು ಮಾಡಿಕೊಳ್ಳೋಕೆ ಆಗುತ್ತಾ? ಅಣ್ಣ-ತಮ್ಮಂದಿರೇ ಜಗಳ ಆಡ್ತಾರಂತೆ. ನಮ್ಮದು ಯಾವ ಜಗಳ. ನಾನು ಯಾರ ಜೊತೆಯೂ ಜಗಳ ಆಡೋಕೆ ಹೋಗಲ್ಲ. ಯಾವ ವಿಚಾರಕ್ಕೂ ನಾನು ಯಾರೊಬ್ಬರ ಮೇಲೂ ಹೇಳಿಕೆ ಕೊಟ್ಟಿಲ್ಲ. ನನ್ನ ರೆಕಾರ್ಡ್ ತೆಗೆದು ನೋಡಿ. ವಿಪಕ್ಷಗಳಿಗೆ ಉತ್ತರ ಕೊಟ್ಟಿದ್ದೇನೆ ಹೊರತು, ನಾನಾಗಿ ನಾನು ಯಾರ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ಯಾರ್ಮೆಲಾದ್ರು ನಾನು ಮಾತಾಡಿರೋದು ಇದ್ದರೆ ಒಂದು ತೋರಿಸಿ ಎಂದು ಹೇಳಿದ್ದಾರೆ.
ನಾನು, ಸಿಎಂ ಕೂಡಾ ಆಪ್ತರೇ. ನಾವಿಬ್ಬರು ಬ್ರದರ್ಸ್ ತರಹ ಕೆಲಸ ಮಾಡ್ತಾ ಇಲ್ಲವಾ? ಅವರು 14 ವರ್ಷದಿಂದ ನಮ್ಮ ಪಾರ್ಟಿಗೆ ಬಂದಾಗಿನಿಂದ ಯಾವುದಾದ್ರು ಒಂದು ವಿಷಯದಲ್ಲಿ ಭಿನ್ನಾಭಿಪ್ರಾಯ ಇದೆಯಾ? ಎಲ್ಲೂ ಭಿನ್ನಾಭಿಪ್ರಾಯ ಇಲ್ಲ. ವಿಪಕ್ಷಗಳು ಸೃಷ್ಟಿ ಮಾಡ್ತಿದ್ದಾರೆ ಅಷ್ಟೆ. ನಿಮಗೆ ಆಹಾರ ಬೇಕು ಮಾಡಿಕೊಳ್ತಾ ಇದ್ದೀರಾ ಅಷ್ಟೆ ಎಂದಿದ್ದಾರೆ.
ವಿ.ಆರ್.ಸುದರ್ಶನ ಖರ್ಗೆ ಅವರಿಗೆ ಪತ್ರ ಬರೆದ ವಿಚಾರಕ್ಕೆ ಯಾವುದೇ ಗೊಂದಲ ಇಲ್ಲ. ಪರಮೇಶ್ವರ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ನಾನು ಯಾರಿಗೂ ಉತ್ತರ ಕೊಡಲ್ಲ. ಯಾವುದೇ ಗೊಂದಲ ಇಲ್ಲ. ಬಿಜೆಪಿ ಅವರಿಗೆ ಅವರ ಗೊಂದಲ ಮುಚ್ಚಿಕೊಳ್ಳಬೇಕು. ಇನ್ನೂ ನೀವೇ ನನ್ನ ಕಾನ್ಫಿಡೆನ್ಸ್. ಅನವಶ್ಯಕವಾದ ಪಬ್ಲಿಸಿಟಿ ಕೊಡ್ತಾ ಇದ್ದೀರಿ. ಜನ ಆಶೀರ್ವಾದ ಮಾಡಿರುವುದೇ ನನ್ನ ಕಾನ್ಫಿಡೆನ್ಸ್. ಈಗ ಎರಡು ನಿಮಿಷದ ಹಿಂದೆಯೂ ಹೈಕಮಾಂಡ್ ಜೊತೆಗೆ ಮಾತನಾಡಿದೆ. ಹೈಕಮಾಂಡ್ ಜೊತೆಗೆ ಮಾತನಾಡುತ್ತಲೇ ಇರುತ್ತೇನೆ ಎಂದು ತಿಳಿಸಿದ್ದಾರೆ.



