ವಾಷಿಂಗ್ಟನ್/ನವದೆಹಲಿ: ನಾನು ಬಯಸಿದರೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಜಕೀಯ ಜೀವನವನ್ನು ನಾಶಗೊಳಿಸಬಲ್ಲೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆ ಭಾರೀ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಭಾರತ-ಅಮೆರಿಕ ನಡುವೆ ಹೊಸ ವಾಣಿಜ್ಯ ಒಪ್ಪಂದ ನಡೆದ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿಯವರ ಬಗ್ಗೆ ಈ ಹಿಂದೆ ಆಡಿದ್ದ ಮಾತುಗಳ ಹಳೆಯ ವಿಡಿಯೋಗಳು ಮತ್ತೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಡೊನಾಲ್ಡ್ ಟ್ರಂಪ್ ಅವರು ಈ ಹೇಳಿಕೆಯನ್ನು ನೀಡಿದ್ದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದ ಟ್ರಂಪ್, ಮೋದಿ ಉತ್ತಮ ವ್ಯಕ್ತಿ. ನನಗೆ ಅವರ ರಾಜಕೀಯ ಜೀವನವನ್ನು ನಾಶಪಡಿಸುವ ಇಷ್ಟವಿಲ್ಲ. ಆದರೆ, ಅವರು ನನ್ನನ್ನು ಪ್ರೀತಿಸುತ್ತಾರೆ. ಅವರು ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆಂದು ಹೇಳಿದ್ದರು.
ಈ ವಿಚಾರವಾಗಿ ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ, ಹಠಾತ್ತಾಗಿ ತೈಲ ಖರೀದಿ ನಿಲ್ಲಿಸಿದರೆ ದೇಶದ ಒಳಗೆ ಮೋದಿ ಅವರಿಗೆ ರಾಜಕೀಯವಾಗಿ ಸಂಕಷ್ಟ ಎದುರಾಗಬಹುದು ಎಂಬ ಅರ್ಥದಲ್ಲಿ ಟ್ರಂಪ್ ಅವರ ರಾಜಕೀಯ ಭವಿಷ್ಯವನ್ನು ಹಾಳು ಮಾಡಲು ಬಯಸುವುದಿಲ್ಲ ಎಂದು ತಮಾಷೆಯಾಗಿ ಹೇಳಿದ್ದರು.
ಈ ಹೇಳಿಕೆ ಇದೀಗ ವೈರಲ್ ಆಗಿದ್ದು. ವಿರೋಧಪಕ್ಷಗಳು ಮೋದಿಯವರ ಕುರಿತು ಡೊನಾಲ್ಡ್ ಟ್ರಂಪ್ ಅವರ ಬಳಿ ಯಾವ ಬ್ರಹ್ಮಾಸ್ತ್ರವಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಟ್ರಂಪ್ ಅವರ ವೀಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು, ಮೋದಿ ಟ್ರಂಪ್ ಅವರನ್ನು ಪ್ರೀತಿಸುತ್ತಾರೆ, ಏಕೆಂದರೆ ನಾನು ಅವರ ರಾಜಕೀಯ ವೃತ್ತಿಜೀವನವನ್ನು ನಾಶಮಾಡಬಲ್ಲೆ ಎಂದು ಟ್ರಂಪ್ ಪರಿಣಾಮಕಾರಿಯಾಗಿ ಹೇಳುತ್ತಿದ್ದಾರೆ. ಇದರ ಅರ್ಥವೇನು? ಟ್ರಂಪ್ ಅವರ ಬಳಿ ಏನೋ ಸಾಕ್ಷ್ಯವಿದೆ, ಅದು ಬಹಿರಂಗವಾದರೆ ಮೋದಿಯವರ ರಾಜಕೀಯ ವೃತ್ತಿಜೀವನವನ್ನು ನಾಶಪಡಿಸುತ್ತದೆ ಎಂಬ ಕಾರಣಕ್ಕಾಗಿ ಮೋದಿ ಟ್ರಂಪ್ ಅವರನ್ನು ಪ್ರೀತಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದರ್ಥವೇ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಪೋಸ್ಟ್ ನಲ್ಲಿ ಎಪ್ಸ್ಟೀನ್ ಫೈಲ್ಸ್ ಹ್ಯಾಷ್ ಟ್ಯಾಗ್ ಬಳಕೆ ಮಾಡಿದ್ದಾರೆ.
ಅಲ್ಲದೆ ಫೆಬ್ರವರಿ 2, 2026 ರಂದು ಡೊನಾಲ್ಡ್ ಟ್ರಂಪ್ ಮತ್ತು ಪ್ರದಾನಿ ಮೋದಿ ಅವರು ಫೋನ್ ಕರೆ ಮೂಲಕ ಮಾತನಾಡಿದ್ದು, ಈ ಮಾತುಕತೆ ಬಳಿ ಭಾರತೀಯ ಸರಕುಗಳ ಮೇಲಿದ್ದ ಸುಂಕವನ್ನು ಶೇ.50 ರಿಂದ ಶೇ.18ಕ್ಕೆ ಇಳಿಸಲು ಅಮೆರಿಕ ಒಪ್ಪಿಕೊಂಡಿದ್ದು, ಈ ಒಪ್ಪಂದದ ಭಾಗವಾಗಿ, ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮೋದಿ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಇದರ ಬದಲಿಗೆ ಭಾರತವು ಅಮೆರಿಕ ಮತ್ತು ವೆನೆಜುವೆಲಾದಿಂದ ಸುಮಾರು $500 ಬಿಲಿಯನ್ ಮೌಲ್ಯದ ಸರಕುಗಳನ್ನು ಖರೀದಿಸಲಿದೆ ಎಂದು ತಿಳಿಸಿದ್ದು, ಈ ಬೆನ್ನಲ್ಲೇ ಭಾರತವು ತನ್ನ ಆರ್ಥಿಕ ಸ್ವಾಯತ್ತತೆಯನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟಿದೆ ಎಂದು ವಿರೋಧ ಪಕ್ಷಗಳು ಮೋದಿ ಸರ್ಕಾರವನ್ನು ಟೀಕಿಸುತ್ತಿವೆ.



