ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬಂಧಿಸಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ದರ್ಶನ್ ಅವರನ್ನು ವಕೀಲ ಅನಿಲ್ ಭೇಟಿ ಮಾಡಿದರು. ಈ ವೇಳೆ ದರ್ಶನ್ ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಂಬಂಧಿ ಸುಶಾಂತ್ ದರ್ಶನ್ ಅವರನ್ನು ಭೇಟಿಯಾದರು. ನಂತರ ಸಂಬಂಧಿ ಫೋನ್ ಮೂಲಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಜೊತೆ ಮಾತನಾಡಿದರು. ಪತ್ನಿಗೆ ದರ್ಶನ್ ನಾನೇನು ಮಾಡಿಲ್ಲ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದರ್ಶನ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್, ಪವಿತ್ರಾ ಗೌಡ ಜೊತೆ ವಿ. ವಿನಯ್, ಆರ್. ನಾಗರಾಜು, ಎಂ. ಲಕ್ಷ್ಮಣ್, ಎಸ್. ಪ್ರದೋಶ್, ಕೆ. ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್ ರಾಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸತ್ವ ಅಪಾರ್ಟ್ ಮೆಂಟ್ ಬಳಿಯ ಮೋರಿಯಲ್ಲಿ ಸುಮಾರು 35 ವರ್ಷದ ಯುವಕನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದು ತನಿಖೆ ಮಾಡುತ್ತಾ ಹೋದ ಪೊಲೀಸರಿಗೆ ಇದರಲ್ಲಿ ನಟ ದರ್ಶನ್ ಮತ್ತು ಅವರ ಸಹಚರರ ಕೊಲೆಯ ಕೈವಾಡವಿರುವುದು ಪತ್ತೆಯಾಯಿತು. ಅದರಂತೆ ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಹೋದ ಪೊಲೀಸರು ಅಲ್ಲಿ ಬ್ಲೂ ರ್ಯಾಡಿಸನ್ ಹೊಟೇಲ್ ನಲ್ಲಿ ಬೆಳಗಿನ ಜಾವ ಜಿಮ್ ಮಾಡುತ್ತಿದ್ದ ನಟ ದರ್ಶನ್ ಅವರನ್ನು ಅಲ್ಲಿಂದಲೇ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು.