ಬೆಳಗಾವಿ : ಮುಂದಿನ ವರ್ಷ ರಾಷ್ಟ್ರೀಯ ಜನಗಣತಿ ಆರಂಭವಾಗಲಿದ್ದು, ಸರ್ಕಾರಿ ಶಾಲಾ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ಕಳುಹಿಸಲು ವೈಯಕ್ತಿಕವಾಗಿ ಇಷ್ಟ ಇಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿ, ಈ ಸಂಬಂಧ ಕೇಂದ್ರಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಈ ವೇಳೆ ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಈಗಾಗಲೇ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನೂ ಏಕಕಾಲಕ್ಕೆ ಭರ್ತಿ ಮಾಡಲು ಆಗುವುದಿಲ್ಲ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ 53 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನೂ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 45,590 ಶಿಕ್ಷಕರ ಹುದ್ದೆಗಳು ಹಾಗೂ ಪ್ರೌಢಶಾಲೆಗಳಲ್ಲಿ 12,134 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 1,78,935 ಹುದ್ದೆಗಳು ಹಾಗೂ ಸರ್ಕಾರಿ ಪ್ರೌಢಶಾಲೆಗಳಿಗೆ 44,144 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಕ್ರಮವಾಗಿ 1,33,345 ಹುದ್ದೆಗಳು ಮತ್ತು 32,010 ಹುದ್ದೆಗಳು ಭರ್ತಿಯಾಗಿವೆ ಎಂದು ಹೇಳಿದರು.
ಅಲ್ಲದೇ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 5,900 ಶಿಕ್ಷಕರ ನೇಮಕಕ್ಕೂ ಚಾಲನೆ ನೀಡಲಾಗುವುದು. ಅಜೀಂಪ್ರೇಮ್‌ಜಿ ಪ್ರತಿಷ್ಠಾನದಿಂದ 1,591 ಕೋಟಿ ರೂ.ಗಳನ್ನು ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ನೀಡಲಾಗುತ್ತಿದೆ. ರಾಜ್ಯಸರ್ಕಾರದಿಂದ 2 ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ಧಾರಣೆ ಹೆಚ್ಚಿರುವುದರಿಂದ ಅದಕ್ಕೆ ನೀಡುವ ಹಣವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು ಹಾಗೂ ಶಾಸಕ ಸುರೇಶ್‌ಕುಮಾರ್‌ರವರ ಪ್ರಸ್ತಾಪದಂತೆ ಮುಂದಿನ ಅಧಿವೇಶನದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ 2 ದಿನ ವಿಶೇಷ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಸಚಿವರು ಮನವಿ ಮಾಡಿದರು.
ಮಂಜೂರಾಗಿರುವ 10,629 ಬೋಧಕೇತರ ಹುದ್ದೆಗಳ ಪೈಕಿ 6,908 ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 3,721 ಹುದ್ದೆಗಳು ಖಾಲಿ ಇವೆ. ವಿದ್ಯಾವಿಕಾಸ ಯೋಜನೆಯಡಿ ವಾರದಲ್ಲಿ ಆರು ದಿನ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದ ಅವರು, ಪ್ರಸಕ್ತ ಸಾಲಿನಲ್ಲಿ ಮೊದಲನೇ ಜೊತೆ ಸಮವಸ್ತ್ರಕ್ಕಾಗಿ 83.07 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 2ನೇ ಸಮವಸ್ತ್ರಕ್ಕಾಗಿ 80.66 ಕೋಟಿ ರೂ. ಲಭ್ಯವಿದೆ ಎಂದು ತಿಳಿಸಿದರು.



