ಮಂಗಳೂರು(ದಕ್ಷಿಣ ಕನ್ನಡ): ನಾನು ಶ್ರದ್ಧೆ, ಪ್ರಾಮಾಣಿಕತೆಗಳ ಜೊತೆಗೆ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾ ನಗುಮೊಗದ ಸೇವೆಯಲ್ಲಿಯೇ ಸಂತೋಷವನ್ನು ಕಂಡಿದ್ದೇನೆ ಎಂದು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮದನ್ ರೈ ತಿಳಿಸಿದ್ದಾರೆ.
ಅವರು ಮಂಗಳೂರು ನಗರದಲ್ಲಿ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ 60 ವರ್ಷಕ್ಕೂ ಮಿಕ್ಕಿ ರೂಂ ಸರ್ವಿಸ್ ವಿಭಾಗದಲ್ಲಿ ದಾಖಲೆಯ ಸೇವೆ ಸಲ್ಲಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವರಾಗಿರುವ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತು , ಮಂಗಳೂರು ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
1963 ಅಕ್ಟೋಬರ್ 20 ರಂದು ನಾನು ಇಲ್ಲಿ ಕೆಲಸಕ್ಕೆ ಸೇರಿದೆ. ಉತ್ತಮ ಸೇವೆಯಿಂದ ಮಾಲಿಕರ ಮತ್ತು ಗ್ರಾಹಕರ ಪ್ರೀತಿಯನ್ನು ಗಳಿಸಿದೆ. ಸುದೀರ್ಘ ಸೇವೆಯೇ ನನಗೆ ಸಂಪೂರ್ಣ ನೆಮ್ಮದಿ ಮತ್ತು ಹೆಮ್ಮೆಯ ಸಂಗತಿ , ಅದನ್ನು ಇಂದು ಜಿಲ್ಲಾಡಳಿತ ಗುರುತಿಸಿರುವುದು ಸಂತೋಷ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವುಡ್ ಲ್ಯಾಂಡ್ಸ್ ಹೋಟೆಲ್ ನ ಪಾಲುದಾರ ವೈ. ಭಾಸ್ಕರ ಭಟ್ ಮಾತನಾಡಿ, ಮದನ್ ತಮ್ಮ ತಂದೆಯವರ ಕಾಲದಿಂದಲೇ ಇಲ್ಲಿ ಇದ್ದು , ಎಲ್ಲರಿಗೂ ಅತ್ಯಂತ ಪ್ರೀತಿಯ ವ್ಯಕ್ತಿ, ಎಂದೂ ಅವರ ಮೇಲೆ ಯಾವುದೇ ದೂರು , ಅಸಮಾಧಾನದ ಪ್ರಕರಣಗಳಿಲ್ಲ , ನಮ್ಮ ಜನಪ್ರಿಯತೆಯಲ್ಲಿ ಅವರದೂ ದೊಡ್ಡ ಪಾತ್ರವಿದೆ ಎಂದು ವಿವರಿಸಿದರು.
ಕ ಸಾ ಪ ತಾಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಅಭಿನಂದಿಸಿದರು. ಗೌ. ಕಾರ್ಯದರ್ಶಿಗಳಾದ ಡಾ. ಮುರಲೀಮೋಹನ್ ಚೂಂತಾರು , ಎನ್. ಗಣೇಶ್ ಪ್ರಸಾದ್ ಜೀ , ಗೌ. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ , ಸಮಿತಿಯ ಡಾ. ಮೀನಾಕ್ಷಿ ರಾಮಚಂದ್ರ , ಬಿ. ಕೆ. ನಾಯ್ಕ್ , ಮದನ್ ಅವರ ಪುತ್ರ ಗಣೇಶ್ , ವುಡ್ ಲ್ಯಾಂಡ್ಸ್ ಸಿಬ್ಬಂದಿ ಕುಮಾರ್ ಉಪಸ್ಥಿತರಿದ್ದರು.