ಬೆಂಗಳೂರು: ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸುವುದಕ್ಕೆ ವರಿಷ್ಠರು ಒಪ್ಪಿದರೆ ನನ್ನ ಅಭ್ಯಂತರವಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ನನ್ನ ಕರ್ತವ್ಯ. ನಿರಂತರವಾಗಿ ನಾನು ಆ ಕೆಲಸ ಮಾಡುತ್ತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಚಟುವಟಿಕೆಗಳು ಪಕ್ಷಕ್ಕೆ ಪೂರಕ. ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬಬೇಕು. ಕೇಂದ್ರದ ನಾಯಕತ್ವ ಅನುಮತಿ ನೀಡಿದರೆ ಬಳ್ಳಾರಿ ಪಾದಯಾತ್ರೆ ನಡೆಸಲಿ ಎಂದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ, ಹೊಂದಾಣಿಕೆ ವರಿಷ್ಠರ ವಿವೇಚನೆಗೆ ಬಿಟ್ಟದ್ದು. ಈ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸಿದ್ದ ಸಿ.ಪಿ. ಯೋಗೇಶ್ವರ್ ತಮ್ಮದೇ ಆದ ಹಿಡಿತ, ಶಕ್ತಿ ಹೊಂದಿದ್ದಾರೆ. ಆದರೆ ಇದು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಆಯ್ಕೆಯಾದ ಕ್ಷೇತ್ರ ಎನ್ನುವುದನ್ನು ಮರೆಯಬಾರದು ಎಂದರು.