ರಾಯಚೂರು: ನಾನು ಯಾವುದೇ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ದೂರಿನ ಬೆನ್ನಲ್ಲೇ ಸಚಿವ ಎನ್.ಎಸ್.ಬೋಸರಾಜು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಪತ್ನಿ ಹೆಸರಿನಲ್ಲಿ ರಾಯಚೂರಿನಲ್ಲಿ ೫ ಎಕರೆ ಮೀಸಲು ರಕ್ಷಿತ ಅರಣ್ಯ ಪ್ರದೇಶ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲಹಳ್ಳಿ ಅ.೨೧ ರಾಜ್ಯಪಾಲರಿಗೆ ದೂರು ನೀಡಿದ್ದರು.
ಬೋಸರಾಜು ಅಧಿಕಾರ ದುರ್ಬಳಕೆ ಮಾಡಿಕೊಂಡು ಪತ್ನಿ ಕೃಷ್ಣವೇಣಿ ಮೂಲಕ ಅರಣ್ಯ ಭೂಮಿ ಕಬಳಿಸಿದ್ದಾರೆ. ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಮೀಸಲು ಅರಣ್ಯ ಭೂಮಿ ವಶಕ್ಕೆ ಪಡೆದಿದ್ದಾರೆ. ಪತ್ನಿ ಸೇರಿ ನಾಲ್ಕು ಜನರಿಗೆ ಸಹಾಯ ಮಾಡಿ, ಒಟ್ಟು ೧೬ ಎಕರೆ ೨೧ ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ. ಸಿ.ಎಚ್.ಶ್ರೀನಿವಾಸ, ಕೃಷ್ಣವೇಣಿ, ಮುತ್ಯಾಲ ತಿರುಮಲ ರಾವ್, ವಿ.ಶಿವನಾಥ್ ವಿರುದ್ಧ ೨೦೨೨ರ ಆ.೪ ರಂದು ರಾಯಚೂರು ಉಪವಲಯ ಅರಣ್ಯಾಧಿಕಾರಿಗಳಿಂದ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಕ್ರಮ ಜರುಗಿಸಿಲ್ಲ ಎಂದು ದಿನೇಶ್ ಕಲಹಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಭೂಕಬಳಿಕೆದಾರರೊಂದಿಗೆ ಶಾಮೀಲಾಗಿ ಅಕ್ರಮವಾಗಿ ಭೂಮಿ ಪಡೆದು ಲೇಔಟ್ ನಿರ್ಮಾಣ ಮಾಡಿದ್ದಾರೆ. ಸಚಿವರ ವಿರುದ್ಧ ಕ್ರಮ ಕೈಗೊಳಬೇಕು. ಸಚಿವ ಸಂಪುಟದಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ರಾಜ್ಯಪಾಲರ ಬಳಿ ಮನವಿ ಮಾಡಿದ್ದಾರೆ.