ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಉದ್ಯಮಿ ಮುಮಾಝ್ ಅಲಿ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ, ಪೊಲೀಸ್ ಠಾಣೆ, ಜೈಲು, ನ್ಯಾಯಾಲಯಕ್ಕೆ ಅಲೆದಾಡುವಂತಾಯಿತು. ನನ್ನ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಫೆ.12ರಂದು ತಡೆಯಾಜ್ಞೆ ನೀಡಿದೆ. ಸತ್ಯಾಸತ್ಯತೆ ಅರಿಯದೇ ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗಿದೆ ಎಂದು ನಂದಾವರ ಶಂಶುಲ್ ಉಲಮಾ ಎಜುಕೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಲಂದರ್ ಶಾಫಿ ನಂದಾವರ ಹೇಳಿದ್ದಾರೆ.
ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪ್ರೆಸ್ ಮೀಟಲ್ಲಿ ಮಾತನಾಡುತ್ತಾ, ಉದ್ಯಮಿ ಮುಮಾಝ್ ಅಲಿ ಆತ್ಮಹತ್ಯೆ ಪ್ರಕರಣದಲ್ಲಿ ಆಯಿಷಾ ರೆಹಮತ್ ಎಂಬಾಕೆ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದರೆ, ಇತರ ಆರೋಪಿಗಳ ಸ್ಥಾನದಲ್ಲಿ ನನ್ನನ್ನೂ ಸೇರಿಸಲಾಗಿತ್ತು. ನನಗೆ ಮುತ್ತಾಝ್ ಅಲಿ ಹಾಗೂ ಆಯಿಷಾ ರೆಹಮತ್ ಅವರ ಪರಿಚಯವೇ ಇರಲಿಲ್ಲ. ಅವರನ್ನು ಭೇಟಿ ಮಾಡಿಲ್ಲ, ದೂರವಾಣಿ ಕರೆಯನ್ನೂ ಮಾಡಿಲ್ಲ. ಆದರೂ, ನನ್ನ ಮೇಲೆ ಹಣಕ್ಕಾಗಿ ಬ್ಲಾಕ್‌ಮೇಲ್‌ನಂತಹ ಗಂಭೀರ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿದ್ದು, ನೂರು ದಿನ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಮಾಡಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗಿದೆ. ಈ ಮಧ್ಯೆ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ಹಣವಿಲ್ಲದೆ ಕಷ್ಟಪಡಬೇಕಾಯಿತು. ಇದೀಗ ನನ್ನ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಹೇಳಿದ್ದಾರೆ.