ಕೊಪ್ಪಳ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಿರಿಯ ಅಧಿಕಾರಿ ಎಲ್.ಕೆ.ಅತೀಕ್ ಅವರನ್ನು ತಮ್ಮ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ, ಮಾಜಿ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಈ ಬೆಳವಣಿಗೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂಬ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಬದಲಾದ ಬಳಿಕ ಹೊಸ ಸಿಎಂ ತಮ್ಮ ವಿಶ್ವಾಸದ ವ್ಯಕ್ತಿಯನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡುವುದು ಸಹಜ ಇದು ಆಡಳಿತಾತ್ಮಕ ಪ್ರಕ್ರಿಯೆ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಬಸವರಾಜ ರಾಯರೆಡ್ಡಿ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಲ್.ಕೆ.ಅತೀಕ್ ಅವರನ್ನು ಹೊಸ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರ ಹುದ್ದೆಯಿಂದ ನನ್ನನ್ನು ಯಾರೂ ಕೈಬಿಟ್ಟಿಲ್ಲ. ಮುಖ್ಯಮಂತ್ರಿ ಬದಲಾದ ಬಳಿಕ ಹೊಸದಾಗಿ ಅಧಿಕಾರ ವಹಿಸಿಕೊಂಡವರು ತಮ್ಮ ಆಯ್ಕೆಯ ವ್ಯಕ್ತಿಯನ್ನು ನೇಮಕ ಮಾಡುವುದು ಸಹಜ. ಅದರಲ್ಲಿ ಯಾವುದೇ ತಪ್ಪಿಲ್ಲ. ಆಡಳಿತಾತ್ಮಕವಾಗಿ ಹೊಸ ಆದೇಶ ಹೊರಡಿಸುವುದು ಅನಿವಾರ್ಯವಾಗಿತ್ತು ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಿಎಂ ನನ್ನ ವಿರುದ್ಧವಾಗಿಲ್ಲ. ಆಡಳಿತದ ಅಗತ್ಯಕ್ಕೆ ಅನುಗುಣವಾಗಿ ಇಂತಹ ಬದಲಾವಣೆಗಳು ರಾಜಕೀಯದಲ್ಲಿ ಸಾಮಾನ್ಯ. ಈ ನಿರ್ಧಾರದಿಂದ ನನಗೆ ಯಾವುದೇ ಬೇಸರವಿಲ್ಲ ಎಂದು ತಿಳಿಸಿದರು. ರಾಯರೆಡ್ಡಿ ಅವರ ಈ ಹೇಳಿಕೆಯಿಂದ, ಆರ್ಥಿಕ ಸಲಹೆಗಾರರ ಬದಲಾವಣೆ ಕುರಿತಾಗಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದ ಅಸಮಾಧಾನದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.



