ನಾಗಮಂಗಲ : ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಉತ್ಪಾದಕರ ಸಹಕಾರ ಸಂಘಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ನಲ್ಲಿಗೆರೆ ಬಾಲು ತಿಳಿಸಿದರು. ಪಟ್ಟಣದ ಟಿ.ಬಿ.ಬಡಾವಣೆಯ ಮನ್ ಮುಲ್ ಉಪಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯದರ್ಶಿಗಳು, ಉತ್ಪಾದಕರು ಮತ್ತು ಆಡಳಿತ ಮಂಡಳಿ ಸದಸ್ಯರೊಂದಿಗಿನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘಗಳ ಬೆಳವಣಿಗೆ ಹಾಗೂ ಉತ್ಪಾದಕರಿಗೆ ಅಗತ್ಯ ಸಹಕಾರ ನೀಡುವುದರಿಂದ ಗುಣಮಟ್ಟದ ಹಾಲು ದೊರಕಿ ಸಂಘಗಳ ಆರ್ಥಿಕ ಮುನ್ನಡೆಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಉತ್ಪಾದಕರು ಹಾಗೂ ಕಾರ್ಯದರ್ಶಿಗಳ ಸಮನ್ವಯತೆ ಮುಖ್ಯ ಎಂದರು.
ನಿರ್ದೇಶಕನಾಗಿ ಆಯ್ಕೆ ಆದಾಗಿನಿಂದ ನನ್ನ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಮಾಡಲಾಗಿದೆ. ಆದರೂ ಧೃತಿಗೆಡದೆ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಗುರಿಯಾಗಿದೆ ಎಂದರು. ಅರಿವು ಕಾರ್ಯಕ್ರಮದಲ್ಲಿ ಡೇರಿಯಲ್ಲಿ ಬರುವ ಸಾಮಾನ್ಯ ಸಮಸ್ಯೆಗಳ ಬಗ್ಗೆ ಕಾರ್ಯದರ್ಶಿಗಳಾದ ಉಮಾಶಂಕರ್, ಬಸವರಾಜ್, ಶಿವಣ್ಣ, ಶ್ರೀನಿವಾಸ್ ಗಮನ ಸೆಳೆದರು.
ಮಂಡ್ಯ ಹಾಲು ಒಕ್ಕೂಟ ನಿರ್ದೇಶಕ ಕೋಟಿ ರವಿ ಮಾತನಾಡಿ, ನಿರ್ದೇಶಕನಾಗಿ ನಾಲ್ಕುವರೆ ವರ್ಷಗಳಿಂದ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಆರು ತಿಂಗಳ ನಂತರ ಚುನಾವಣೆ ನಡೆಯಲಿದ್ದು ಮುಂದಿನ ಅವಧಿಗೂ ಸ್ಪರ್ಧಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ೨೦೨೪ರ ಮನ್ಮುಲ್ ಹೊಸ ಡೈರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ನಾಗಮಂಗಲ ತಾಲೂಕು ಉಪ ಕೇಂದ್ರದ ಅಧಿಕಾರಿಗಳು ನೌಕರವರ್ಗದವರು ಹಾಜರಿದ್ದರು.