ಮೈಸೂರು: ಸಿದ್ದರಾಮಯ್ಯ ಕೇವಲ ಮೂರು ವರ್ಷ ಮಾತ್ರವಲ್ಲ ಹತ್ತು ವರ್ಷ ಸಿಎಂ ಆಗಿ ಇರಬೇಕೆಂಬುದು ನನ್ನಾಸೆ ಎಂದು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ ಅವರು ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಮುಂದುವರೆಯುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ನಮಗೆ ಗೊತ್ತಿಲ್ಲ ಎಂದರು. ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಡಾ ಪ್ರಕರಣದಲ್ಲಿ ಅಂತಿಮವಾಗಿ ಲೋಕಾಯುಕ್ತ ನಡೆಸಿದ ತನಿಖೆ ವರದಿಯಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಇದನ್ನು ನಾವು ನಿರೀಕ್ಷೆ ಮಾಡಿದ್ದೆವು. ನಾನೊಬ್ಬ ಮುಡಾ ಸದಸ್ಯನಾಗಿ ಸಿಎಂ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದೆ ಎಂದರು.
ಮುಡಾ ವಿಚಾರದಲ್ಲಿ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವುದರಿಂದ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಮತ್ತಷ್ಟು ಗಟ್ಟಿಯಾದರು ಎನ್ನುವುದಿಲ್ಲ. ಹಿಂದಿನಿಂದಲೂ ಸಿದ್ದರಾಮಯ್ಯ ರಾಜಕೀಯವಾಗಿ ಗಟ್ಟಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಕೇವಲ ೧೪ ಸೈಟ್ ಮಾತ್ರವಲ್ಲ ೧೪೦೦ ಸೈಟ್ ಬೇಕಾದರೂ ತೆಗೆದುಕೊಳ್ಳಬಹುದಿತ್ತು ಆದರೆ ಅಂತಹ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿಲ್ಲ. ರಾಜಕೀಯದ ಕೊನೆಯ ಕಾಲದಲ್ಲಿ ಒಂದು ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಶಾಸಕ ಕೆ ಹರೀಶ್ ಗೌಡ ಹೇಳಿದರು.
ಮೈಸೂರಿನ ಕೆ ಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ಮಾತನಾಡಿದ ಅವರು ದಾಸಪ್ಪ ವೃತ್ತದಿಂದ ಚಿಕ್ಕಣ್ಣ ವೃತ್ತದವರೆಗೆ ಮಾತ್ರ ಪ್ರಿನ್ಸಸ್ ರಸ್ತೆ ಎಂಬ ಹೆಸರಿದೆ. ಅಲ್ಲಿಂದ ಮುಂದಕ್ಕೆ ಪ್ರಿನ್ಸಸ್ ರಸ್ತೆ ಎಂಬ ಹೆಸರಿಲ್ಲ. ಹೀಗಾಗಿ ಕೆ ಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯನವರ ಹೆಸರು ಇಟ್ಟೇ ಇಡುತ್ತೀವಿ. ಸಂಸದ ಯದುವೀರ್ ಒಡೆಯರ್ ಅವರನ್ನೂ ಕೂಡ ಭೇಟಿ ಮಾಡಿ ಮನವಿ ಮಾಡುತ್ತೀವಿ. ಜತೆಗೆ ಯಾರೆಲ್ಲ ವಿರೋಧ ಮಾಡ್ತಿದ್ದಾರೋ ಅವರ ಬಳಿಯೂ ಮನವಿ ಮಾಡುತ್ತೀವಿ ಎಂದು ಹೇಳಿದರು.