ನವದೆಹಲಿ: ಟೀಕೆ ಮಾಡುವ ಜನರು ಯಾವಾಗಲೂ ಇರ್ತಾರೆ, ನನ್ನ ವಿರುದ್ಧ ಬರುವ ಟೀಕೆಗಳನ್ನು ಸ್ವೀಕಾರ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಸೋತ ತಕ್ಷಣ ನಾನು ರಾಜಕೀಯ ಬಿಡುವುದಿಲ್ಲ ನಾನು ನನ್ನ ಕೊನೆ ಉಸಿರು ಇರುವವರೆಗೂ ರಾಜಕೀಯ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಹೇಳಿದ್ದಾರೆ.
ಶಾಸಕ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ನವದೆಹಲಿಯಲ್ಲಿ ತಿರುಗೇಟು ನೀಡಿದ ಅವರು, ಶುಕ್ರವಾರ ಸಂಸತ್ ನಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಬಗ್ಗೆ ಮಾತನಾಡಿದ್ದೇನೆ. ನನ್ನ ರಾಜ್ಯಸಭೆ ಅವಧಿ 18 ತಿಂಗಳು ಇದೆ, ನನ್ನ ಆರೋಗ್ಯ ಇರುವವರೆಗೂ ನಾನು ಹೋರಾಟ ಮಾಡುತ್ತೇನೆ, ಆರೋಗ್ಯ ವ್ಯತಾಸ ಆದರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಹಾಸನದಲ್ಲಿ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶದ ಬಗ್ಗೆ ಮಾತನಾಡಿದ ಅವರು, ಹಾಸನದಲ್ಲಿ ಸಮಾವೇಶದಿಂದ ಜೆಡಿಎಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಜೆಡಿಎಸ್ ಟಾರ್ಗೆಟ್ ಮಾಡಲೆಂದೇ ಹಾಸನದಲ್ಲಿ ಸಮಾವೇಶ ಮಾಡಿದ್ದಾರೆ. ಅದನ್ನು ಎದುರಿಸುವ ಸಾಮರ್ಥ್ಯ ಜೆಡಿಎಸ್‌ಗೆ ಇದೆ ಇಂದೂ ಎದುರಿಸುತ್ತೇವೆ, ನಾಳೆಯೂ ಎದುರಿಸುತ್ತೇವೆ. ಸಮಾವೇಶದಿಂದ ಏನ್ ಲಾಭ ಒಂದು ದಿನ ಬಂದರು ಮಾತನಾಡಿ ಹೋದರು ಎಂದರು.
ದೇವೇಗೌಡರನ್ನು ನಾವೇ ಸಿಎಂ ಮಾಡಿದ್ದು ಎನ್ನುವ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯಕ್ಕೆ ಬಂದಿದ್ದು ಯಾವಾಗ? ರಾಮಕೃಷ್ಣ ಹೆಗೆಡೆ ಅವರನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯನಾ? ಕನಕಪುರದಲ್ಲಿ ನಿಲ್ಲಿಸಿ ಗೆಲ್ಲಿಸಿ ಸಿಎಂ ಮಾಡಿದ್ದು ಸಿದ್ದರಾಮಯ್ಯ ನಾ? ಆ ಹೆಗೆಡೆ ಅವರು ಸಿದ್ದರಾಮಯ್ಯ ಅವರನ್ನು ಕಾವಲು ಸಮಿತಿ ಅಧ್ಯಕ್ಷ ಮಾಡಿದ್ರಾ? ಯಾರಿಗೇಳ್ತಾರೆ, ಸುಳ್ಳು ಎಷ್ಟು ದಿನ ಹೇಳಬಹುದು ಎಂದು ಕುಟುಕಿದರು.
ನಿಖಿಲ್ ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಸೋತರೂ ಅವರ ನಾಯಕತ್ವ ಮುಂದೆ ಬೆಳೆಯುತ್ತೆ, ಅವರಿಗೆ ಶಕ್ತಿ ಕೊಡಲು ಪಕ್ಷ ನಿರ್ಣಯ ಮಾಡಿದೆ. ಸೋಲಿನಿಂದ ಧೃತಿಗೆಟ್ಟಿಲ್ಲ, ಹೋರಾಟ ಮಾಡುವ ಕೆಚ್ಚೆದೆ ಇದೆ. ಸೋಲನ್ನು ಸಮತಲದಲ್ಲಿ ತೆಗೆದುಕೊಂಡಿದ್ದೇವೆ, ಇವತ್ತು ಜನರು ಸೋಲಿಸಿದ್ದಾರೆ, ನಾಳೆ ಗೆಲ್ಲಿಸುತ್ತಾರೆ, ಸೋಲು ಗೆಲುವಿಗಾಗಿ ಧೃತಿಗೆಟ್ಟು ಕೂರಲು ಸಾಧ್ಯವಿಲ್ಲ. ನಿಖಿಲ್ ಸಿನಿಮಾ ಬಿಟ್ಟು ಬಹಳ ದಿನ ಆಗಿದೆ. ಹಿರಿಯ ನಾಯಕರ ಒಂದಾಗಿ ಸದಸ್ಯತ್ವ ಅಭಿಯಾನ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಎಲ್ಲ ನಾಯಕರು ಸೇರಿ ಪಕ್ಷವನ್ನು ಮರು ಸಂಘಟನೆ ಮಾಡಬೇಕು ಅಂದರೆ ಮಾಡುತ್ತಾರೆ ಎಂದು ನಿಖಿಲ್ ಗೆ ರಾಜ್ಯಧ್ಯಕ್ಷ ಜವಾಬ್ದಾರಿ ನೀಡುವ ಬಗ್ಗೆ ಸುಳಿವು ನೀಡಿದರು.
ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಮೈತ್ರಿ ಹೋರಾಟ ವಿಚಾರ ಕುರಿತು ಮಾತನಾಡಿ, ಸಂಸತ್‌ನಲ್ಲಿ ಜೊತೆಗೆ ಹೋರಾಟ ಮಾಡಿದ್ದೇವೆ, ಈಗಲೂ ಮಾಡುತ್ತೇವೆ, ಜೊತೆಗೆ ಹೋಗುತ್ತೇವೆ ಎಂದರು. ಜಿಟಿ ದೇವೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಮಾತನಾಡಲು ಅವರು ನಿರಾಕರಿಸಿದರು.