ಬೆಂಗಳೂರು: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ತಮ್ಮ ಉಚ್ಛಾಟನೆಗೆ ಯಡಿಯೂರಪ್ಪ ನೇರ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, 2028ರ ಚುನಾವಣೆ ಬಳಿಕ ನಾನೇ ಮುಖ್ಯಮಂತ್ರಿ ಆಗುತ್ತೇನೆಂದು ಹೇಳಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಯತ್ನಾಳ್, “ನಾನು ಯಾರ ಕೈ-ಕಾಲು ಹಿಡಿಯುವುದಿಲ್ಲ. ಬಿಜೆಪಿಗೆ ವಾಪಸ್ ಹೋಗೋದು ನನಗೆ ಗೊತ್ತಿದೆ. 2028ಕ್ಕೆ ಯಡಿಯೂರಪ್ಪ ಮಗ ವಿಜಯೇಂದ್ರನೇ ರಾಜ್ಯದ ಮುಖ್ಯಮಂತ್ರಿ ಆಗಬೇಕಾ? ನಾನು ಚಾಲೆಂಜ್ ಮಾಡುತ್ತೇನೆ, 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ” ಎಂದು ಹೇಳಿದ್ದಾರೆ.
“ಮೋದಿ ಅವರು ಪ್ರತಿ ಸಾರ್ವಜನಿಕ ರ್ಯಾಲಿಯಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಹಾಗೂ ಹೊಂದಾಣಿಕೆ ರಾಜಕೀಯವನ್ನು ಅಂತ್ಯಗೊಳಿಸುವುದಾಗಿ ಹೇಳುತ್ತಲೇ ಇದ್ದಾರೆ. ನಾನು ಕೂಡ ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬದ ಪಕ್ಷವನ್ನಾಗಿ ಮಾಡಿಕೊಂಡಿರುವ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಆದರೆ, ನನ್ನನ್ನು ಪಕ್ಷದಿಂದ ಹೊರಹಾಕಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ. ಪಕ್ಷಕ್ಕೆ ನಿಷ್ಠರಾಗಿದ್ದೇವೆ. ನಾನು ಯಾವಾಗಲೂ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿಯಂತಹ ಬಿಜೆಪಿ ನಾಯಕರನ್ನು ಬೆಂಬಲಿಸಿದ್ದೇನೆ. ಪ್ರಧಾನಿ ಮೋದಿ ಒಳ್ಳೆಯ ನಾಯಕ, ಆದರೆ ಕೆಳ ಹಂತಗಳಲ್ಲಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದಿದ್ದಾರೆ.