ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಂಘಟನೆ ಮತ್ತು ನಾಯಕತ್ವದ ಗುಣವನ್ನು ನೋಡಿ ನೀಡಿರುವ ಪದವಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಅಧಿಕಾರ ನೀಡಿದ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೋರಿದ ದಾರಿಯಲ್ಲಿ ನಡೆಯುತ್ತೇನೆ ಎಂದು ಮಾಜಿ ಸಚಿವ ಸಾ ರಾ ಮಹೇಶ್ ತಿಳಿಸಿದರು.
ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕದ ಆದೇಶ ನಂತರ ಮಾತನಾಡಿದ ಸಾರಾ ಮಹೇಶ್ ಅವರು, ನಾನು ಎಂದು ಕನಸು ಮನಸ್ಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಆದರೆ ನನ್ನನ್ನು ನಂಬಿ ನೀಡಿದ ಅಧಿಕಾರವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಪಕ್ಷ ಸಂಘಟನೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೇನೆ. ಆದರೆ ನಾನು ಮೊದಲೇ ಹೇಳಿದಂತೆ ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ತಿಳಿಸಿದರು.
ನನ್ನದೇನಿದ್ದರೂ ತತ್ವ ಸಿದ್ಧಾಂತ ನಿಷ್ಠೆ ರಾಜಕಾರಣವೇ ವಿನಹ ಅಧಿಕಾರಕ್ಕಾಗಿ ಸಮಯ ಸಾಧಕ ರಾಜಕಾರಣ ಮಾಡುವುದಿಲ್ಲ ಅದರ ಅಗತ್ಯವೂ ನನಗಿಲ್ಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹೊಂದಾಣಿಕೆಯಾಗಿದ್ದು, ಕ್ಷೇತ್ರಗಳ ಬಗ್ಗೆ ಅವರೇ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಅದಕ್ಕೆ ನಾವೆಲ್ಲರೂ ಬದ್ಧರಾಗಿ ಇರಬೇಕಾಗುತ್ತದೆ ಎಂದು ತಿಳಿಸಿದರು.
ಎಷ್ಟು ಕ್ಷೇತ್ರಗಳು ಮತ್ತು ಯಾವ ಯಾವ ಕ್ಷೇತ್ರಗಳು ಎಂದು ನಿಗದಿಯಾಗಿಲ್ಲ.:- ಕೇವಲ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ 4, 6 ಹಾಗೂ ಮೈಸೂರು ಮಂಡ್ಯ ಹಾಸನ ಚಿಕ್ಕಬಳ್ಳಾಪುರ ಕೋಲಾರ ತುಮಕೂರ್ ಬೆಂಗಳೂರು ಗ್ರಾಮಾಂತರ ಎಂದು ಚರ್ಚೆಯಾಗುತ್ತಿದೆ. ಇದೆಲ್ಲಾ ಸತ್ಯಕ್ಕೆ ದೂರವಾದ ವಿಷಯವಾಗಿದ್ದು, ಕ್ಷೇತ್ರಗಳು ಅಭ್ಯರ್ಥಿಗಳು ಯಾರು ಎಂದು ಇನ್ನೂ ನಿರ್ಣಯವಾಗಿಲ್ಲ ವರಿಷ್ಠರು ನಿರ್ಣಯ ಮಾಡಿದ ಕ್ಷೇತ್ರ ಮತ್ತು ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಕೆಲವು ವ್ಯಕ್ತಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಅಧಿಕಾರದ ಆಸೆಗಾಗಿ ಈ ಕ್ಷೇತ್ರ ಬಿಟ್ಟು ಕೊಡುವುದಿಲ್ಲ ಆ ಕ್ಷೇತ್ರ ಬಿಟ್ಟು ಕೊಡುತ್ತೇವೆ ಎಂಬ ಹೇಳಿಕೆಯಿಂದ ಪಕ್ಷದ ವರಿಷ್ಠರಿಗೆ ಬೇಸರವಾಗಿದೆ ಆದರೆ ಇದೆಲ್ಲವನ್ನು ಗಮನಿಸುತ್ತಿರುವ ವರಿಷ್ಠರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ ಮಾಜಿ ಸಚಿವರು, ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಬಯಕೆ ಇರುವವರು ಯಾರು ಸಹ ಕ್ಷೇತ್ರ ಮತ್ತು ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಹೆಸರನ್ನು ಹೇಳದೆ ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಶಾಸಕ ಪ್ರೀತಂ ಗೌಡರ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಅಭಿವೃದ್ಧಿ ಮಾಡದೆ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ :- ಕೇವಲ ಕೇಂದ್ರ ಸರ್ಕಾರವನ್ನು ಟೀಕಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿರುವುದರಿಂದ ಅದನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುತ್ತಿದೆ ಉಚಿತ ಭಾಗ್ಯಗಳನ್ನು ನೀಡುವ ನೆಪದಲ್ಲಿ ರಸ್ತೆ ಕೃಷಿ ನೀರಾವರಿ ಯೋಜನೆಗಳನ್ನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ರಾಜ್ಯದ ಜನತೆ ಆಕ್ರೋಶಗೊಂಡಿದ್ದು ಇದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಬೀರಬಾರದು ಎಂದು ರಾಜ್ಯದ ಜನತೆಯ ದಿಕ್ಕು ತಪ್ಪಿಸುವಂಥ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
28 ಕ್ಷೇತ್ರಗಳು ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆಲುವು :- ಕಾಂಗ್ರೆಸ್ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಹೊಂದಾಣಿಕೆಯಿಂದ ಸ್ಪರ್ಧಿಸುವ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲಿದ್ದು ಕರ್ನಾಟಕ ರಾಜ್ಯದಲ್ಲಿ ಈ ಬಾರಿ ದಾಖಲೆಯನ್ನು ನಿರ್ಮಿಸುತ್ತೇವೆ ಎಂದ ಮಾಜಿ ಸಚಿವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಣ್ಣ ಬಯಲಾಗುತ್ತದೆ ಎಂದು ತಿಳಿಸಿದರು.