ಮೈಸೂರು: ಬಿಜೆಪಿಯವರ ಮೇಲೆ ಅನೇಕ ಆರೋಪಗಳಿವೆ. ಕರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ ಆಯೋಗ ವರದಿ ಸಲ್ಲಿಸಿದ್ದು, ೩೩೦ ರೂಪಾಯಿಗೆ ಸಿಗುವ ಪಿಪಿಇ ಕಿಟ್ ನ್ನು ೨೧೪೦ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಏನು ಹೇಳುತ್ತಾರೆ ಭ್ರಷ್ಟಾಚಾರ ಮಾಡಿರುವುದು ಅವರ ಸರ್ಕಾರ ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ.ಭ್ರಷ್ಟಾಚಾರ ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಕಾಂಗ್ರೆಸ್ ಪಕ್ಷ ಹಗಲು ದರೋಡೆ ಮಾಡುತ್ತಿದೆ. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದಿರುವ ಬಗ್ಗೆ ಮಾಧ್ಯಮದವರಿಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ರಾಜಕೀಯ ನಿವೃತ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು
ನರೇಂದ್ರ ಮೋದಿ ಅವರು ಅಬಕಾರಿ ಇಲಾಖೆಯಲ್ಲಿ ೭೦೦ ಕೋಟಿ ವಸೂಲಿ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ಅವರು ಪ್ರಧಾನ ಮಂತ್ರಿ ಸ್ಥಾನ ನೀಡಲು ಸಿದ್ಧರಿದ್ದಾರೆಯೇ ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದರು.
ಇಂದು ಮತದಾನ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲಿ ಜನಸ್ಪಂದನೆ ನೋಡಿದರೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಪ್ರಧಾನಿ ಟೀಕೆ:
ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಕರ್ನಾಟಕವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕ ದೊಡ್ಡ ರಾಜ್ಯವಾಗಿದ್ದು, ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ೧೩೬ ಸ್ಥಾನಗಳನ್ನು ಪಡೆದಿರುವುದರಿಂದ , ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿಯವರು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ ಎಂದರು
ಸುಳ್ಳು ಆರೋಪಗಳ ಮೇಲೆ ಇಡಿ ತನಿಖೆ:
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ಇಡಿಯವರು ಕಾನೂನು ಪ್ರಕಾರ ಮಾಡುವ ತನಿಖೆ ನಡೆಸಲಿ , ಅದಕ್ಕೆ ಯಾವುದೇ ರೀತಿಯ ಪ್ರತಿರೋಧವನ್ನು ನಾವು ಒಡ್ಡುವುದಿಲ್ಲ. ಇಡಿ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಸುಳ್ಳು ಆರೋಪಗಳ ಮೇಲೆ ತನಿಖೆ ನಡೆಯುತ್ತಿದೆ ಎಂಬುದಷ್ಟೇ ಹೇಳಬಲ್ಲೇ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಬಗ್ಗೆ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಮಾಜಿ ಪ್ರಧಾನಿ ದೇವೇಗೌಡರು ಸಿದ್ದರಾಮಯ್ಯನ ಸೊಕ್ಕು ಮುರಿಯುತ್ತೇವೆ ಎಂದಿರುವುದು ಎಷ್ಟರ ಮಟ್ಟಿಗೆ ಸರಿ ಓರ್ವ ಮುಖ್ಯಮಂತ್ರಿಗೆ ಈ ರೀತಿ ಹೇಳುವುದು ಸರಿಯೇ ಎಂದು ಪ್ರಶ್ನಿಸಿ, ಜಮೀರ್ ಅಹ್ಮದ್ ಹಾಗೂ ಕುಮಾರಸ್ವಾಮಿಯವರು ಒಂದು ಕಾಲದಲ್ಲಿ ಆಪ್ತರಾಗಿದ್ದರು. ಆದರೆ ಪ್ರಸ್ತುತ ಅವರ ನಡುವಿನ ಸಂಬಂಧ ಹೇಗಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದರು.