ಮೈಸೂರು : ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಶೋಧನಾ ಕೇಂದ್ರ ತೆರೆಯಲಿರುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು, ಮೈಸೂರಿನಲ್ಲಿ ಕೇಂದ್ರದ 2026-2027ನೇ ಸಾಲಿನ ಆಯವ್ಯಯದ ಕುರಿತಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಯೋಜನೆ ಕಾರ್ಯಗತ ಮಾಡಲು 100 ಎಕರೆ ಭೂಮಿ ಅಗತ್ಯವಿದ್ದು, ಆದಷ್ಟು ಬೇಗ ಭೂಮಿಯನ್ನು ಹಂಚಿಕೆ ಮಾಡಬೇಕು ಎಂದು ಸ್ವತಃ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಅವರು ಆದಷ್ಟು ಬೇಗ ಭೂಮಿ ನೀಡುವ ವಿಶ್ವಾಸವಿದೆ ಎಂದಿದ್ದಾರೆ.
ಮುಂದುವರೆದು, ಇದು ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಮಂಡ್ಯ, ಮೈಸೂರು ಭಾಗಕ್ಕೆ ಮಾತ್ರವಲ್ಲದೆ ಇಡೀ ರಾಜ್ಯ ಆಟೋಮೊಬೈಲ್ ಕ್ಷೇತ್ರಕ್ಕೆ ಬೂಸ್ಟರ್ ನಂತೆ ಕೆಲಸ ಮಾಡುತ್ತದೆ. ಬಜೆಟ್ ನಲ್ಲಿಯೇ ಇದಕ್ಕೆ ಹಣ ಮಂಜೂರು ಆಗಿದೆ ಎಂದು ತಿಳಿಸಿದರು.
ಅಲ್ಲದೆ ಕೇಂದ್ರ ಸರಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸ್ವಾಯತ್ತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇದಾಗಿದ್ದು, ಭಾರತೀಯ ಆಟೋಮೋಟಿವ್ ಉದ್ಯಮದಲ್ಲಿ ಪರೀಕ್ಷೆ, ಪ್ರಮಾಣೀಕರಣ ಮತ್ತು ಸಂಶೋಧನೆಗೆ ಪ್ರಮುಖ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಪರಿಸ್ಥಿತಿ ನೋಡಿದರೆ ಬಹಳ ನೋವಾಗುತ್ತದೆ. ರಾಜ್ಯದ ಸದ್ಯದ ರಾಜಕೀಯ ವಾತಾವರಣ ನೋಡಿದರೆ ನಾನು ಇಲ್ಲಿಯೇ ಇಲ್ಲಿರಬೇಕಿತ್ತು ಎನಿಸುತ್ತಿದೆ. ಸಮಯ ಬಂದಾಗ ವಾಪಸ್ಸು ಬರುತ್ತೇನೆ ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಇನ್ನೂ ರಾಜ್ಯಕ್ಕೆ ಏನೂ ತರಬೇಕು ಎಂಬುದನ್ನು ರಾಜ್ಯ ಸರಕಾರದಿಂದ ಸಂಸದರು ಹೇಳಿಸಿಕೊಳ್ಳುವವರಲ್ಲ. ಎಲ್ಲರಿಗೂ ರಾಜ್ಯದ ಬಗ್ಗೆ ಕಾಳಜಿ, ಕಳಕಳಿ ಇದೆ. ರಾಜ್ಯದ ಯಾರಾದರೂ ಒಬ್ಬರು ಮಂತ್ರಿ ಬಂದು ನನ್ನ ಬಳಿ ರಾಜ್ಯಕ್ಕೆ ಇಂತಹ ಪ್ರಾಜೆಕ್ಟ್ ತರಿಸಿಕೊಡಿ ಎಂದು ಕೇಳಿಲ್ಲ. ನಮ್ಮ ಸರಕಾರ ಬಂದು ಹತ್ತಿರತ್ತರ ಎರಡು ವರ್ಷ ಆಗುತ್ತಾ ಬರುತ್ತಿದೆ. ಒಮ್ಮೆಯಾದರೂ ನಮ್ಮನ್ನು ಕರೆಸಿ ಚರ್ಚಿಸಿಲ್ಲ, ಅವರೂ ಬಂದಿಲ್ಲ. ಕಾಳಜಿ ಯಾರಿಗಿಲ್ಲ ಎನ್ನುವುದಕ್ಕೆ ಇಷ್ಟು ಸಾಕ್ಷ್ಯ ಸಾಕಲ್ಲವೇ? ಎಂದು ಹೇಳಿದರು.
ಇನ್ನೂ ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಬೆಲೆ ಏರಿಕೆಗೆ ಕೇಂದ್ರ ಸರಕಾರ ಹೊಣೆ ಎಂದು ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ. ಕೇಂದ್ರದ ಜತೆ ಸಂಘರ್ಷ ಯಾಕೆ? ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯದ ನಡುವೆ ಉತ್ತಮ ಬಾಂಧವ್ಯ ಇರಬೇಕು.
ಎಲ್ಲದಕ್ಕೂ ಕೇಂದ್ರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್ಯ ಸರಕಾರ ಬಿಡಬೇಕು. ಪ್ರಧಾನಮಂತ್ರಿಗಳನ್ನು ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಬೈಯ್ಯೋದು, ಅಮೇಲೆ ಪತ್ರ ಕಳಿಸುವ ವರ್ತನೆಯನ್ನು ರಾಜ್ಯ ಸರಕಾರ ಬದಲಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಕಿವಿಮಾತು ಹೇಳಿದರು.
ಜಿ.ಟಿ. ದೇವೇಗೌಡರು ನಮ್ಮ ಜತೆಯಲ್ಲಿ ಇಲ್ಲ. ಅವರ ಬಗ್ಗೆ ನೀವು ಕೇಳುವುದು ಬೇಡ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದು, ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದು ಇಲ್ಲದವರನ್ನು ನಾವು ಜತೆಯಲ್ಲಿಟ್ಟುಕೊಳ್ಳಬೇಕಾ? ನನ್ನ ಮುಂದೆ ಇನ್ನು ಮುಂದೆ ಪದೇಪದೆ ಅವರ ಹೆಸರು ಪ್ರಸ್ತಾಪ ಮಾಡಬೇಡಿ. ನಮ್ಮನ್ನು ರಾಜೀನಾಮೆ ಕೊಡುತ್ತಾರ ಎಂದು ಕೇಳಿ ಮುಖ್ಯಮಂತ್ರಿಗೆ ಸರ್ಟಿಫಿಕೇಟ್ ಕೊಡುತ್ತಾರೆ! ನಮಗೆ ಒಂದು ದಿನವೂ ಸರ್ಟಿಫಿಕೇಟ್ ಕೊಡಲಿಲ್ಲ. ಅಂಥವರನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಕಾ? ಎಂದು ಹೇಳಿದರು.



