Friday, April 4, 2025
Google search engine

Homeರಾಜ್ಯಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ತಯಾರಿಸಲು ICMR ಒಪ್ಪಿಗೆ: ಸಚಿವ ದಿನೇಶ್ ಗುಂಡೂರಾವ್

ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ತಯಾರಿಸಲು ICMR ಒಪ್ಪಿಗೆ: ಸಚಿವ ದಿನೇಶ್ ಗುಂಡೂರಾವ್

ಉಡುಪಿ: ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ಕುರಿತು ಐಸಿಎಂಆರ್ ಜೊತೆ ಚರ್ಚೆ ನಡೆಸಲಾಗಿದ್ದು, ವ್ಯಾಕ್ಸಿನ್ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದ್ದಾರೆ.

ಇಂದು ಉಡುಪಿಯಲ್ಲಿ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ.‌ ಮಾರ್ಚ್ ವರೆಗೆ ಜನ ಬಹಳ ಎಚ್ಚರಿಕೆಯಿಂದ ಇರಬೇಕು. ಲಕ್ಷಣಗಳು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.‌ ಮಂಗನ ಕಾಯಿಲೆಗೆ ಎಬಿಎಆರ್ ಕೆ ಫಂಡ್ ನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಕೆ.ಎಫ್.ಡಿ ಪಾಸಿಟಿವ್ ಬಂದವರನ್ನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ರಾಜ್ಯದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಒಟ್ಟು 70 ಕೆಎಫ್ ಡಿ ಪ್ರಕರಣ ದಾಖಲಾಗಿವೆ. ಹಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 20 ಸಕ್ರಿಯ ಪ್ರಕರಣಗಳು ಇವೆ.  2 ಸಾವಾಗೀಡಾಗಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುವುದಾಗಿ ಗುಂಡೂರಾವ್ ತಿಳಿಸಿದರು. 

ಸಾವು ಆಗದೆ ಇರುವ ಬಗ್ಗೆ ಮುನ್ನೆಚ್ಚರಿಕೆ ಕಾರ್ಯಕ್ರಮ ಕೈಗೊಳ್ಳುಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಿಂದೆ ಇರುವ ವ್ಯಾಕ್ಸಿನ್ ಬಳಕೆ ಮಾಡಬೇಡಿ ಎಂದು ಸೂಚಿಸಲಾಗಿದೆ. ಹೊಸ ವ್ಯಾಕ್ಸಿನ್ ಬಗ್ಗೆ ಐಸಿಎಂಆರ್ ಜೊತೆ ಚರ್ಚೆ ನಡೆಸಲಾಗಿದೆ. ಐಸಿಎಂಆರ್ ನವರು ವ್ಯಾಕ್ಸಿನ್ ತಯಾರಿಕೆಗೆ ಒಪ್ಪಿಗೆ ನೀಡಿದ್ದು, ಹೈದರಾಬಾದ್ ಸಂಸ್ಥೆ ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸುತ್ತಿದೆ. ಮುಂದಿನ ವರ್ಷಕ್ಕೆ ಮಂಗನ ಕಾಯಿಲೆಗೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು. 

ಉಣ್ಣೆ ಕಡಿತವನ್ನು ತಡೆಗಟ್ಟಲು ಬಳಸಲಾಗುವ DEPA ತೈಲವನ್ನು ಸಾರ್ವಜನಿಕರಿಗೆ ಬಳಸಲು ಉಚಿತವಾಗಿ ನೀಡಲಾಗಿದೆ. ರಾಜ್ಯಾದ್ಯಂತ ಈವರೆಗೆ 62794  DEPA ಬಾಟಲ್ ಗಳನ್ನು ವಿತರಿಲಾಗಿದೆ. ರಾಜ್ಯ ಮಟ್ಟದಿಂದ ಅಧಿಕಾರಿಗಳು, RRT ತಂಡ ನಿಯಮಿತವಾಗಿ ಭೇಟಿ ನೀಡುತ್ತಿದ್ದು, ಸಮಯೋಚಿತ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಪ್ರತಿ ದಿನ ವಿ.ಸಿ. ಮುಖೇನ ಸದರಿ ಕಾರ್ಯ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ನಡೆಸಲಾಗುತ್ತಿದೆ.

VDL ಶಿವಮೊಗ್ಗ ಮತ್ತು MIV ಮಣಿಪಾಲದಲ್ಲಿನ ಪ್ರಯೋಗಾಲಯಗಳನ್ನು ಕೆಎಫ್ ಡಿ ಪರೀಕ್ಷೆಗೆ ಗುರುತಿಸಲಾಗಿದ್ದು, ಶೀಘ್ರವಾಗಿ ಮಾದರಿಗಳನ್ನು ಸಂಸ್ಕರಿಸಿ ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿದೆ.ಕೆಎಫ್ ಡಿಪಾಸಿಟಿವ್ ಪ್ರಕರಣಗಳನ್ನು ಮನೆಯಿಂದ ಆಸ್ಪತ್ರೆಗೆ ಸಾಗಿಸಲು ಮತ್ತು ಅಗತ್ಯವಿದ್ದರೆ, ಉನ್ನತ ರೆಫರಲ್ ಸೆಂಟರ್‌ ಗೆ ಸಾಗಿಸಲು ಉಚಿತ ಆಂಬ್ಯುಲೆನ್ಸ್ ಸೌಲಭ್ಯ ಒದಗಿಸಿದೆ. ರೋಗ ಪ್ರಸರಣಾ ಋತುವಿನಲ್ಲಿ ತಾಲ್ಲೂಕು ಆಸ್ಪತ್ರೆಗಳಾದ ಜಿಸಿಎಚ್ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಕೆಎಫ್ ಡಿ ಗೆ ಚಿಕಿತ್ಸೆ ನೀಡಲು ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ICU ನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ಸ್ಥಿತಿ-ಗತಿಯನ್ನು ಪ್ರತಿದಿನ ಪರೀಶೀಲಿಸಲು ಟೆಲಿ-ICU ಸೇವೆಯನ್ನುಕೆಎಫ್ ಡಿಗೂ ವಿಸ್ತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
 

RELATED ARTICLES
- Advertisment -
Google search engine

Most Popular