ರಾಮನಗರ: ಜಿಲ್ಲೆಯಲ್ಲಿರುವ ಅನಾಥ, ಏಕಪೋಷಕ, ಅನಾರೋಗ್ಯ ಪೀಡಿತ, ಬಂಧೀಖಾನೆಯ ನಿವಾಸಿಗಳ ಮಕ್ಕಳು ಮತ್ತು ವಿಧ್ಯಾಭ್ಯಾಸ ನಡೆಸಲು ಆರ್ಥಿಕ ಸಂಕಷ್ಟ ಎದುರುಸುತ್ತಿರುವ ಮಕ್ಕಳನ್ನು ಪತ್ತೆಹಚ್ಚಿ ಅವರಿಗೆ ನೆರವು ನೀಡಬೇಕು ಹಾಗೂ ಇಂತಹ ಮಕ್ಕಳನ್ನು ಪತ್ತೆಹಚ್ಚಲು ಇಲಾಖೆಯ ಅಧಿಕಾರಿಗಳು ಮತ್ತು ಸಂಘ, ಸಂಸ್ಥೆಗಳು ಕಾರ್ಯ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ತಿಳಿಸಿದರು.
ಅವರು ಮೇ ೨೩ರ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶೇಷ ಪಾಲನಾ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನ ೧ನೇ, ೨ನೇ, ೩ನೇ ಮತ್ತು ೪ನೇ ಕಂತಿನ ಅನುದಾನ ಬಿಡುಗಡೆಯಾಗಿದ್ದು, ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಅನುದಾನ ಜಮಾ ಮಾಡಲಾಗಿರುತ್ತದೆ ಎಂದರು. ಪ್ರಾಯೋಜಿತ ಕಾರ್ಯಕ್ರಮದಡಿ ೨೦೨೩-೨೪ನೇ ಸಾಲಿನ ೧ನೇ, ೨ನೇ, ೩ನೇ ಮತ್ತು ೪ನೇ ಕಂತಿನ ಒಟ್ಟು ೧೫೪ ಫಲಾನುಭವಿಗಳಿಗೆ ಅನುದಾನ ಬೇಡಿಕೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಹಾಗೂ ೨೦೨೪-೨೫ನೇ ಸಾಲಿನ ಏಪ್ರಿಲ್ ೨೦೨೪ರ ಮಾಹೆಯಲ್ಲಿ ಹೊಸದಾಗಿ ೨೫ ಅರ್ಜಿಗಳು ಸ್ವೀಕೃತಗೊಂಡಿದ್ದು ಪ್ರಸ್ತುತ ಪರಿಶೀಲನಾ ಹಂತದಲ್ಲಿರುತ್ತದೆ ಎಂದು ತಿಳಿಸಿದರು.
ವಲಸೆ ಬಂದ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಬಾಲನ್ಯಾಯ ಕಾಯ್ದೆ-೨೦೧೫, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿಯ ಕಾರ್ಯವೈಖರಿ, ಬಾಲ್ಯವಿವಾಹ, ಬಾಲಕಾರ್ಮಿಕತೆ, ಪೋಕ್ಸೋ ಕಾಯ್ದೆ, ದತ್ತು ಪ್ರಕ್ರಿಯೆ ಹಾಗೂ ಮಾಸಾಚರಣೆ ಮಕ್ಕಳ ಸಹಾಯವಾಣಿ ಕುರಿತಂತೆ ತರಬೇತಿ ನೀಡಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ದತ್ತು ಕಾರ್ಯಕ್ರಮದಡಿ ಒಟ್ಟಾರೆ ೬ ಮಕ್ಕಳಿಗೆ ಜಿಲ್ಲಾಧಿಕಾರಿಗಳಿಂದ ದತ್ತು ಆದೇಶ ಪಡೆಯಲಾಯಿತು. ಜನವರಿ ೨೦೨೪ ರಿಂದ ಏಪ್ರಿಲ್ ೨೦೨೪ರ ವರೆಗೆ ೪೬ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. ಬಾಲನ್ಯಾಯ ನಿಧಿ ಬಳಕೆಯಲ್ಲಿ ೧೫ ಫಲಾನುಭವಿಗಳಿಗೆ ಬಾಲನ್ಯಾಯ ನಿಧಿಯ ಅನುದಾನವನ್ನು ನೀಡಲು ಪ್ರಗತಿ ಹಂತದಲ್ಲಿರುತ್ತದೆ ಎಂದು ತಿಳಿಸಿದರು.
ಬಾಲನ್ಯಾಯ ಮಂಡಳಿ ಮುಂದೆ ಒಟ್ಟು ೧೧೫ ಪ್ರಕರಣಗಳಿದ್ದು ಅದರಲ್ಲಿ ೨೦೨೩-೨೪ನೇ ಸಾಲಿನಲ್ಲಿ ೫೫ ಪ್ರಕರಣಗಳು ದಾಖಲಾಗಿದ್ದು, ೬೦ ಹಳೆಯ ಪ್ರಕರಣಗಳು ಬಾಕಿ ಇರುತ್ತದೆ. ಪ್ರಸಕ್ತ ಸಾಲಿನಲ್ಲಿ ೩ ಪ್ರಕರಣಗಳು ದಾಖಲಾಗಿದ್ದು, ಒಟ್ಟು ೭೮ ಪ್ರಕರಣಗಳು ಬಾಕಿ ಇರುತ್ತದೆ ಎಂದರು. ೨೦೨೪-೨೫ನೇ ಸಾಲಿನಲ್ಲಿ ಒಟ್ಟು ೩ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ೨ ಪ್ರಕರಣಗಳನ್ನು ತಡೆಯಲಾಗಿದೆ. ೧ ಬಾಲ ಕಾರ್ಮಿಕ ಮಕ್ಕಳ ಪ್ರಕರಣ ದಾಖಲಾಗಿದೆ. ಕೋವಿಡ್-೧೯ರ ಕಾರಣದಿಂದಾಗಿ ೮ ಮಕ್ಕಳು ಪೋಷಕರನ್ನು ಕಳೆದುಕೊಂಡಿರುತ್ತಾರೆ. ೮ ಮಕ್ಕಳನ್ನು ಪಿಎಂ ಕೇರ್‍ಸ್ ಯೋಜನೆಗೆ ಒಳಪಟ್ಟಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಒಟ್ಟು ೮ ಮಕ್ಕಳಲ್ಲಿ ಪ್ರಸ್ತುತ ೩ ಮಕ್ಕಳಿಗೆ ೧೮ ವರ್ಷ ಪೂರ್ಣಗೊಂಡಿರುತ್ತದೆ. ಉಳಿದ ೫ ಮಕ್ಕಳು ಯೋಜನಾ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ ಎಂದು ಮಾಹಿತಿ ನೀಡಿದರು.
ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯಗೊಳಗಾದವರಿಗೆ ೪೮ ಗಂಟೆಗಳಲ್ಲಿ ಪರಿಹಾರವನ್ನು ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಲು ಜಿಲ್ಲೆಯ ೧೨೩ ಗ್ರಾಮ ಪಂಚಾಯಿತಿಗಳಲ್ಲಿರುವ ಪ್ರೌಡಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿಶೇಷ ಕಾರ್ಯಗಾರ ಏರ್ಪಡಿಸಿ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸುವಂತಹ ಕಾರ್ಯವಾಗಬೇಕು ಎಂದರು. ಸಭೆಯಲ್ಲಿ ಡಿವೈಎಸ್‌ಪಿ ದಿನಕರ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಮಕ್ಕಳ ರಕ್ಷಣಾಧಿಕಾರಿ ರಜನಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರುಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.