Friday, April 11, 2025
Google search engine

Homeರಾಜ್ಯಕೃಷಿ ಭೂಮಿ ತಂಟೆಗೆ ಬಂದರೆ ಬಡಿಗೆ ಚಳವಳಿ: ಕೃಷ್ಣೇಗೌಡ ಎಚ್ಚರಿಕೆ

ಕೃಷಿ ಭೂಮಿ ತಂಟೆಗೆ ಬಂದರೆ ಬಡಿಗೆ ಚಳವಳಿ: ಕೃಷ್ಣೇಗೌಡ ಎಚ್ಚರಿಕೆ

ಮೈಸೂರು : ಅಭಿವೃದ್ಧಿ, ಕೈಗಾರಿಕೆ ಮತ್ತಿತರ ಕಾರಣಗಳನ್ನು ನೀಡಿ ಸರ್ಕಾರ ಕೆಐಎಡಿಬಿ ಮೂಲಕ ರೈತರ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಬಾರದು. ಒಂದು ವೇಳೆ ಬಲವಂತದಿಂದ ವಶಪಡಿಸಿಕೊಳ್ಳಲು ಮುಂದಾದರೆ ರೈತರು ಬಡಿಗೆ ಚಳವಳಿ ಹಮ್ಮಿಕೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದರು.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸೋಮವಾರ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಾದ ಭೂಮಿಯನ್ನು ಸರ್ವೆ ಮಾಡಲು ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿ ಗ್ರಾಮಕ್ಕೆ ಬಂದಿದ್ದ ಖಾಸಗಿ ಸಂಸ್ಥೆಯ ಪ್ರತಿನಿಧಿಗಳ ಡ್ರೋನ್ ಮತ್ತು ಲ್ಯಾಪ್‌ಟಾಪ್‌ಗೆ ರೈತರು ಬೆಂಕಿ ಹಚ್ಚಿರುವುದು ಸರಿಯಾದ ಕ್ರಮ. ಅಲ್ಲಿ ಸರ್ವೆಗೆ ಬಂದವರನ್ನು ರೈತರು ಬಡಿಗೆ ತೋರಿಸಿ ಓಡಿಸಿದ್ದಾರೆ. ಇದು ಮುಂದುವರಿದರೆ ಬಡಿಗೆಯಿಂದಲೇ ಬಡಿಯುತ್ತಾರೆ. ಸರ್ಕಾರ ಇದರಿಂದ ಎಚ್ಚೆತ್ತುಕೊಂಡು ಕೃಷಿಗೆ ಯೋಗ್ಯವಾದ ಜಮೀನನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಬಾರದು ಎಂದರು.

ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿ ಮತ್ತು ಮೇಡಹಳ್ಳಿ ಗ್ರಾಮಗಳ ೭೦೦ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೈಗಾರಿಕ ಪ್ರದೇಶ ಸ್ಥಾಪನೆಗೆ ಕೆಐಎಡಿಬಿ ಈಚೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ರೈತರೊಂದಿಗೆ ಮಾತುಕತೆ ನಡೆಸಿಲ್ಲ. ಅವರ ಅಭಿಪ್ರಾಯವನ್ನೂ ಪಡೆದಿಲ್ಲ. ಇಲ್ಲಿ ಯಾವ ರೈತರೂ ಎಕರೆ ಗಟ್ಟಲೆ ಜಮೀನು ಹೊಂದಿಲ್ಲ ತುಂಡು ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಅಂತಹ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡರೆ ಅನ್ನದಾತನ ಬದುಕು ಬೀದಿಗೆ ಬೀಳುತ್ತದೆ ಎಂಬ ಕನಿಷ್ಠ ಜ್ಞಾನವೂ ಈ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಇಲ್ಲದಿರುವುದು ಶೊಚನೀಯ ಎಂದರು.

ಈಗಾಗಲೇ ನಂಜನಗೂಡು, ಚಾಮರಾಜನಗರ ಕಡೆಗಳಲ್ಲಿ ಕೈಗಾರಿಕೆಗಾಗಿ ರೈತರಿಂದ ಜಮೀನು ವಶಕ್ಕೆ ಪಡೆಯಲಾಗಿದೆ. ಸರ್ಕಾರದ ಪರಿಹಾರವನ್ನು ರೈತ ಕಳೆದುಕೊಂಡಿದ್ದಾರೆ. ಕೈಗಾರಿಕೆಗಳಲ್ಲಿ ಕೆಲಸವನ್ನೂ ನೀಡಿಲ್ಲ. ಕೆಲವರಿಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗಿದೆ. ಒಂದು ತಲೆಮಾರು ಕಳೆದರೆ ಬಡ ರೈತರು ಸಂಪೂರ್ಣ ಭೂರಹಿತರಾಗುತ್ತಾರೆ. ಕೃಷಿಭೂಮಿ ಬಲಾಢ್ಯರ ಪಾಲಾಗುತ್ತದೆ. ರೈತಸಂಘ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ರೈತರ ತಮಟೆ ಚಳವಳಿ, ಅರೆಬೆತ್ತಲೆ ಚಳವಳಿ, ಬಾರುಕೋಲು ಚಳವಳಿ ಸರ್ಕಾರ ನೋಡಿದೆ. ರೈತರ ಜಮೀನು ಬಲವಂತವಾಗಿ ವಶಕ್ಕೆ ಪಡೆದರೆ ಇನ್ನು ಮುಂದೆ ಬಡಿಗೆ ಚಳವಳಿಯನ್ನೂ ನಾವು ತೋರಬೇಕಾಗುತ್ತದೆ.

ಇಂಗಲಗುಪ್ಪೆ ಕೃಷ್ಣೇಗೌಡ, ಅಧ್ಯಕ್ಷರು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)

RELATED ARTICLES
- Advertisment -
Google search engine

Most Popular