ಮಂಗಳೂರು (ದಕ್ಷಿಣ ಕನ್ನಡ): ಬಿಜೆಪಿ ಶಾಸಕ ಭರತ್ ಶೆಟ್ಟಿ ಗಂಡು ಮಗ ಆಗಿದ್ದರೆ, ಅವರಿಗೆ ತಾಕತ್ತಿದ್ದರೆ ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈ ಹಾಕಿ ನೋಡಲಿ. ಆಮೇಲೆ ನೋಡೋಣ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ ರೈ ಸವಾಲು ಹಾಕಿದ್ದಾರೆ.
ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಭರತ್ ಶೆಟ್ಟಿಯವರು ರಾಹುಲ್ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ಸರಕಾರ ಸುಮೊಟೋ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಸಂಸತ್ತಿನ ವಿಪಕ್ಷ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾದ ರಾಹುಲ್ ದೇಶಕ್ಕೆ ಪ್ರಾಣ ಕೊಟ್ಟ ನೆಹರೂ, ಇಂದಿರಾಗಾಂಧಿಯವರ ಕುಡಿ. ರಾಹುಲ್ ಹೇಳಿಕೆಯನ್ನು ಕೆಟ್ಟದಾಗಿ ಪ್ರತಿಬಿಂಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಭರತ್ ಶಾಸಕನಾಗಲು ನಾಲಾಯಕ್. ಯೋಗ್ಯತೆ ಇಲ್ಲದ ಮನುಷ್ಯ. ಬಿಜೆಪಿ ವಚನ ಭ್ರಷ್ಟ ಎಂದು ಕುಮಾರ ಸ್ವಾಮಿ ಅಂದು ಹೇಳಿದಾಗ ಭರತ್ ಶೆಟ್ಟಿ ಜನತಾದಳ ಪಕ್ಷದಲ್ಲಿದ್ದ. ಅಮರನಾಥ್ ಶೆಟ್ಟಿಯವರ ಕೃಪಾ ಕಟಾಕ್ಷದಿಂದ ರಾಜಕೀಯದಲ್ಲಿ ಮೇಲೆ ಬಂದು ಅವರಿಗೆ ಕೈ ಕೊಟ್ಟಿದ್ದಾನೆ. ರಾಹುಲ್ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ರಾಹುಲ್ ಅವರನ್ನು ಭರತ್ ಶೆಟ್ಟಿ ಹುಚ್ಚ ಎಂದು ಹೇಳಿದ್ದು, ಆ ಹುಚ್ಚ ಯಾರು ಎಂದು ಅವರ ನಾಯಕರ ಕಟೌಟ್ ನಲ್ಲಿ ಅವರ ವೇಷ ಭೂಷಣ ನೋಡಿದಾಗ ತಿಳಿಯುತ್ತೆ ಎಂದು ವಾಗ್ದಾಳಿ ನಡೆಸಿದರು.