ಮಧ್ಯಪ್ರದೇಶ: ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಹತ್ವದ ಭರವಸೆಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಪ್ರತಿ ಮನೆಗೆ ತಲಾ ಒಂದು ಉದ್ಯೋಗ ನೀಡುವುದಾಗಿ ಸಿಎಂ ಚೌಹಾಣ್ ಘೋಷಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ನಿರಂತರವಾಗಿ ಟೀಕೆ ಮಾಡುತ್ತಿದೆ. ಇದರ ನಡುವೆ ಹಾಲಿ ಸಿಎಂ ಆದಿವಾಸಿಗಳ ಪ್ರಾಬಲ್ಯವಿರುವ ಅಲಿರಾಜಪುರ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಈ ಘೋಷಣೆ ಮಾಡಿದ್ದಾರೆ.
ನಾನು ರಾಜ್ಯದ ಜನರ ಜೀವನದಿಂದ ತೊಂದರೆಗಳನ್ನು ತೊಡೆದುಹಾಕುತ್ತೇನೆ. ಮತ್ತೊಮ್ಮೆ ಆಯ್ಕೆಯಾದರೆ, ಪ್ರತಿಯೊಂದು ಕುಟುಂಬದ ಒಬ್ಬ ವ್ಯಕ್ತಿಗೆ ಉದ್ಯೋಗ ನೀಡಲಾಗುವುದು. ಆದ್ದರಿಂದ, ಆ ಕುಟುಂಬಸ್ಥರು ವಲಸೆ ಹೋಗಬೇಕಾಗಿಲ್ಲ ಎಂದು ಶಿವರಾಜ್ ಸಿಂಗ್ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಸ್ವ-ಸಹಾಯ ಗುಂಪುಗಳು, ಉದ್ಯಮ ಕ್ರಾಂತಿ ಯೋಜನೆ ಅಥವಾ ಸರ್ಕಾರಿ ಉದ್ಯೋಗಗಳ ಮೂಲಕ ಪ್ರತಿ ಕುಟುಂಬದಿಂದ ಒಬ್ಬ ವ್ಯಕ್ತಿಗೆ ಉದ್ಯೋಗ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಜನರ ಜೀವನವನ್ನು ಬದಲಾಯಿಸಲು ನಾನು ಹಗಲಿರುಳು ಶ್ರಮಿಸುತ್ತೇನೆ ಎಂದು ಸಿಎಂ ಚೌಹಾಣ್ ಹೇಳಿದ್ದಾರೆ. ಮತ್ತೊಂದೆಡೆ, ಸಿಎಂ ಈ ಘೋಷಣೆಯ ಕುರಿತು ರಾಜ್ಯ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಕೆಕೆ ಮಿಶ್ರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಯುವಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈಗ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಈ ವರ್ಷದ ನವೆಂಬರ್‌ನಲ್ಲಿ ೨೩೦ ಸದಸ್ಯ ಬಲದ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂಬರುವ ಲೋಕಸಭೆ ಚುನಾವಣೆಗೂ ಬರುವ ಮಹತ್ವದ ಚುನಾವಣೆ ಇದಾಗಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ, ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ಮೂಲಕ ಸರ್ಕಾರ ಬಿದ್ದು ಹೋಗಿತ್ತು. ಇದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.