ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಿದ್ಯಾರ್ಥಿಗಳ ಮಾನಸಿಕ ಹಾಗು ದೈಹಿಕ ಸಾಮರ್ಥ್ಯ ವೃದ್ದಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪೂರಕ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಕುಪ್ಪಳ್ಳಿ ಹೊರವಲಯದ ಶ್ರೀ ಮಹದೇಶ್ವರ ದೇವಾಲಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಮನೋವಿಕಾಸಕ್ಕೆ, ಸರ್ವಾಂಗೀಣ ಪ್ರಗತಿಗೆ ಪೂರಕ. ಕ್ರೀಡೆಯಲ್ಲಿ ಸೋಲು, ಗೆಲವು ಮುಖ್ಯವಲ್ಲ.ಆರೋಗ್ಯಕರ ಸ್ಪರ್ಧೆ ಮುಖ್ಯ ಎಂದರು.
ಬಾಲ್ಯದಲ್ಲಿಯೇ ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ತೋರಿದರೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಹೀಗಾಗಿ ಪೋಷಕರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು. ಸರ್ಕಾರ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತರಬೇತಿ ಹೊಂದಿ ಈ ಮೂಲಕ ದೇಶಕ್ಕೆ ಕೀರ್ತಿ ತರಬೇಕೆಂದು ಕೋರಿದರು.

ಕುಪ್ಪಳ್ಳಿಗೆ ಮಂಜೂರಾಗಿರುವ ಇಂದಿರಾಗಾಂಧಿ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಮಾತನಾಡಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದು, ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗಾಗಲೇ ಈ ಶಾಲೆ ನಿರ್ಮಾಣಕ್ಕೆ ಕುಪ್ಪಳ್ಳಿ ಗ್ರಾಮದಲ್ಲಿ ೧೦ ಎಕರೆ ಜಾಗ ಮಂಜೂರಾಗಿದೆ ಎಂದು ಶಾಸಕರು ತಿಳಿಸಿದರು.
ಮಿರ್ಲೆ ಹೋಬಳಿಯ ೨೦ ಶಾಲೆಗಳ ೩೫೦ ಮಕ್ಕಳು ಪಾಲ್ಗೊಂಡಿದ್ದರು. ಕ್ರೀಡಾಕೂಟಕ್ಕೂ ಮೊದಲು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು. ಕುಪ್ಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೃಷ್ಣೇಗೌಡ ಅವರ ನೇತೃತ್ವದಲ್ಲಿ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಗುಳುವಿನ ಅತ್ತಿಗುಪ್ಪೆ ಗ್ರಾಮದ ನಿವೃತ್ತ ಶಿಕ್ಷಕ ಸಿದ್ದಲಿಂಗೇಗೌಡರ ವತಿಯಿಂದ ವಿಜೇತ ಗುಳುವಿನ ಅತ್ತಿಗುಪ್ಪೆ ಗ್ರಾಮದ ನಿವೃತ್ತ ಶಿಕ್ಷಕ ಸಿದ್ದಲಿಂಗೇಗೌಡರ ವತಿಯಿಂದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕೊಡುಗೆಯಾಗಿ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಭೇರ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಕೆ.ಮಂಜಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ, ಇಸಿಒಜನಾರ್ಧನ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹಾಗು ಹಾಲಿ ನಿರ್ದೇಶಕ ಬಿ.ವಿ. ಪ್ರಸನ್ನ ಕುಮಾರ್,ಸಿ ಆರ್ ಪಿ ಗಳಾದ ಗಿರೀಶ್, ಮಹೇಶ್, ವಸಂತ್ ಕುಮಾರ್,ರಮೇಶ್ ಚಿಕ್ಕಕೊಪ್ಪಲು , ಗ್ರಾಮ ಪಂಚಾಯ್ತಿ ಸದಸ್ಯ ಪ್ರತಾಪ್ ಹಾಗು ದೈಹಿಕ ಶಿಕ್ಷಣ ಶಿಕ್ಷಕರು,ಸಹಶಿಕ್ಷಕರು ಇದ್ದರು. ಚಿತ್ರಶೀರ್ಷಿಕೆ: ಸಾಲಿಗ್ರಾಮ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಿರ್ಲೆ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಡಿ. ರವಿಶಂಕರ್ ಚಾಲನೆ ನೀಡಿದರು