ಮಂಡ್ಯ: ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ತೆರವುಗೊಳಿಸಲು ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರ ಕುಂದು ಕೊರತೆ ಸಭೆ ನಡೆಸಿ ಮಾತನಾಡಿದರು.ಹೊನ್ನಗಳ್ಳಿ ಮಠದ ಗ್ರಮದಲ್ಲಿ ಸರ್ವೆ ನಂ ೧೯ ರಲ್ಲಿ ೪ ಎಕರೆ ಜಮೀನು ಆರ್.ಟಿ.ಸಿ ಯಲ್ಲಿ ಸರ್ಕಾರಿ ಜಮೀನು ಎಂದು ನಮೂದಾಗಿದ್ದರೆ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಉಪವಿಭಾಗಾಧಿಕಾರಿ, ತಹಶೀಲ್ದಾರ್ ಕೋರ್ಟ್‌ಗಳಲ್ಲಿರುವ ಪ್ರಕರಣಗಳ ವಿಲೇವಾರಿ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ. ೧೦ ವಷಕ್ಕಿಂತ ಹಳೆಯ ಪ್ರಕರಣಗಳು ಬಾಕಿ ಇದ್ದಲ್ಲಿ ಪರಿಶೀಲಿಸಲಾಗುವುದು. ಪಿ.ಟಿ.ಸಿ.ಎಲ್ ಪ್ರಕರಣಗಳಿದ್ದಲ್ಲಿ ಆದ್ಯತೆ ಮೇಲೆ ವಿಲೇವಾರಿ ಮಾಡಿ ಎಂದು ಮನವಿ ಮಾಡಿದರು. ಸರ್ಕಾರದ ವತಿಯಿಂದ ಗ್ರಾಮ ಮಟ್ಟದಲ್ಲಿ ಅಂಬೇಡ್ಕರ್ ಭವನ ಅಪೂರ್ಣ ಕಾಮಗಾರಿಗಳಿದ್ದಲ್ಲಿ ಸರ್ಕಾರಕ್ಕೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ. ಪೂರ್ಣಗೊಂಡಿರುವ ಅಂಬೇಡ್ಕರ್ ಭವನಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿ, ಇದರಿಂದ ಭವನ ಬಳಕೆ ಬರಲಿದೆ ಎಂದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್. ಎಸ್ ಅಣೆಕಟ್ಟು ಪಕ್ಕದ ಪೆಂಚಲಾ ಭೋವಿ ಫೈಲ್ ಗ್ರಾಮದಲ್ಲಿ ವಾಸವಿರುವ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಸಂಬಂಧ ಸಭೆಯಲ್ಲಿ ಚರ್ಚಿಸಿದಾಗ ಜಿಲ್ಲಾಧಿಕಾರಿಗಳು ಮಾತನಾಡಿ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ್ ಹಾಗೂ ಡಿ.ಡಿ.ಎಲ್. ಆರ್ ಅವರು ಸ್ಥಳ ಪರಿಶೀಲನೆ ನಡೆಸಿ ಸದರಿ ಸ್ಥಳದ ಬಗ್ಗೆ ವರದಿ ನೀಡಬೇಕು ಎಂದರು. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಎಸ್.ಸಿ, ಎಸ್.ಟಿ ಸಮುದಾಯದವರು ನಿವೇಶನ ಹಾಗೂ ವಸತಿಗಾಗಿ ಅರ್ಜಿ ಸಲ್ಲಿಸಿರುವವರು, ಸೌಲಭ್ಯ ಪಡೆದವರು, ಸೌಲಭ್ಯ ಪಡೆದುಕೊಳ್ಳದಿರುವ ವಿವರ ಸಿದ್ದಪಡಿಸಿ ಇದರಿಂದ ಕಾರ್ಯಕ್ರಮ ರೂಪಿಸಲು ಸಾಧ್ಯ ಎಂದರು.
ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿ ಘಟಕ ನಿರ್ಮಾಣ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ ಎಂದು ಸಭೆಯಲ್ಲಿ ದೂರು ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಆರ್.ಡಿ.ಪಿ.ಆರ್ ಕಾರ್ಯಪಾಲಕ ಅಭಿಯಂತರರು ೨೦ ದಿನದೊಳಗಾಗಿ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು. ಲೋಕೋಪಯೋಗಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನದಡಿ ಕಳೆದ ೩ ವಷಗಳಿಂದ ಕೈಗೊಂಡಿರುವ ಕಾಮಗಾರಿಗಳ ವರದಿಯನ್ನು ಮುಂದಿನ ಸಭೆಗೆ ಒದಗಿಸುವಂತೆ ತಿಳಿಸಿದರು.
ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಯಾವುದೇ ಜಾತಿ ಬೇಧವಿಲ್ಲದೇ ಎಲ್ಲರಿಗೂ ಮುಕ್ತ ಅವಕಾಶವಿದೆ. ಈ ಬಗ್ಗೆ ಪಲಕ ಅನಾಚರಣಗೊಳಿಸಲು ಜಿಲ್ಲಾಡಳಿತದಿಂದ ಪತ್ರ ಬರೆಯಲಾಗುವುದು ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಮಾತನಾಡಿ ನರೇಗಾ ಯೋಜನೆಯಡಿ ಜಿಲ್ಲೆಯ ೨೬೭ ಸ್ಮಶಾನ ಅಭಿವೃದ್ಧಿ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅಂಗನವಾಡಿ ನಿರ್ಮಾಣ ಮಾಡಲು ಸ್ಥಳವಿಲ್ಲದ ಗ್ರಾಮಗಳಲ್ಲಿ ಶಾಲೆಗಳಲ್ಲಿ ಸ್ಥಳಾವಕಾಶ ಇದ್ದರೆ ನಿರ್ಮಾಣ ಮಾಡಿ. ಶಾಲೆಯಲ್ಲೂ ಸ್ಥಳ ಇಲ್ಲದಿದ್ದಲ್ಲಿ ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿ ಎಂದರು.
ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯಲ್ಲಿ ಪರುಶಿಷ್ಟ ಜಾತಿ ಹಾಗೂ ವರ್ಗದವರಿಗೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಉಪವಿಭಾಗಾಧಿಕಾರಿ ನಂದೀಶ್, ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಉಪಸ್ಥಿತರಿದ್ದರು.