ಹುಣಸೂರು: ನಮ್ಮ ಆರೋಗ್ಯ ಕಾಪಾಡಿಕೊಳ್ಳಲು, ವಿಶೇಷ ಕಾಳಜಿವಹಿಸಲು ದಿನದ ಮಹತ್ವ ತಿಳಿಯಲೆಂದೇ ಅದಕ್ಕೆ ಒಂದು ಹೆಸರಿಟ್ಟು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಅದರಂತೆ ಕ್ಯಾನ್ಸರ್ ವಿಶ್ವ ದಿನವನ್ನು ಆಚರಿಸಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಪಲ್ಲವಿ ಕೆ. ತಿಳಿಸಿದ್ದಾರೆ.

ನಗರದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಹುಣಸೂರು ಅಪೊಲೋ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಗಿಡಕ್ಕೆ ನೀರೆರೆದು ಮಾತನಾಡಿದ ಅವರು, ಶಿಕ್ಷಣ, ಉದ್ಯೋಗದ ಜತೆಗೆ ನಿಮ್ಮ ಅಮೂಲ್ಯವಾದ ಆರೋಗ್ಯವನ್ನು ಸಮತೋಲನದಲ್ಲಿ ಉಳಿಸಿಕೊಳ್ಳದಿದ್ದರೆ ಮಿಕ್ಕಿದ್ದೆಲ್ಲ ಶೂನ್ಯವೆಂದರು.
ಅಪೋಲೋ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಕವಿತಾ ಬಿ. ಮಾತನಾಡಿ, ಪ್ರಸ್ತುತ ಆಹಾರ ಅಸಮತೋಲನದಿಂದ ಮನುಷ್ಯನ ಆರೋಗ್ಯ ಹಾಳಾಗುತ್ತಿದ್ದು, ಆಹಾರ ಸೇವಿಸುವಾಗ ಜಾಗ್ರತೆ ವಹಿಸಬೇಕಿದೆ. ಮಕ್ಕಳಿರಲಿ, ದೊಡ್ಡವರಿರಲಿ ಹೊರಗಡೆ ಸಿಗುವ ಜಂಕ್ ಫುಡ್ ಗೆ ಕಡಿವಾಣ ಹಾಕಬೇಕು ಎಂದರು.
ನಾವು ಇಂದು ಆರೋಗ್ಯದ ವಿಚಾರದಲ್ಲಿ ಎಷ್ಟೇ ಅರಿವು ಪಡೆದರೂ ಜನಸಂಖ್ಯೆ ಹೆಚ್ಚಾದಂತೆ ನಮ್ಮಿಂದ ಆಗುತ್ತಿರುವ ಅವಘಡದಿಂದ ಪರಿಸರ ಪರಿಶುದ್ಧತೆ ಕಳೆದುಕೊಂಡಿದೆ. ನಾವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಆರೋಗ್ಯವೇ ಸಮಾಜದ ಭಾಗ್ಯವೆಂದು ಭಾವಿಸಿ ವಿಶ್ವದೆಲ್ಲೆಡೆ ಉಚಿತ ಆರೋಗ್ಯ ಶಿಬಿರದ ಜೊತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯಯುಕ್ತ ಸಮಾಜದ ಕನಸು ಕಾಣುತ್ತಿದೆ ಎಂದರು.
ಶಿಬಿರದಲ್ಲಿ 25 ಕ್ಕೂ ಹೆಚ್ಚು ಶಿಬಿರಾರ್ಥಿಗಳ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಶ್ಯಾಮಣ್ಣ ಧರ್ಮಾಪುರ, ಕಮ್ಯುನಿಟಿ ಚೇರ್ಮನ್ ರಾಜಶೇಖರ್, ಡಾ.ಪ್ರಸನ್ನ, ಮಹೇಶ್, ಹುಣಸೂರು ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ಕೇಶವ್, ಶ್ರೀ ನಿವಾಸ್ ಇದ್ದರು.



