ಕೋಲಾರ : ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಯಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಹೈಕಮಾಂಡ್ಗೆ ವಿಜಯೇಂದ್ರ ವಿರುದ್ಧ ದೂರು ನೀಡಿದ್ದು, ಇನ್ನೊಂದು ಕಡೆ ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಸರಿಯಾಗಿ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಇದೀಗ ಹೊಸ ದಾಳವನ್ನು ಉರುಳಿಸಿದ್ದಾರೆ.
ಈ ಕುರಿತು ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಸದ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಇದ್ದಾರೆ. ಆಕಸ್ಮಿಕವಾಗಿ ಬದಲಾದರೆ ನಾನು ರಾಜ್ಯಾಧ್ಯಕ್ಷನಾಗಲು ಸಿದ್ಧನಿದ್ದೇನೆ ಎಂದು ಹೊಸ ದಾಳ ಉರುಳಿಸಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಿಸಿ ಎಂದು ಒತ್ತಾಯ ಮಾಡಲ್ಲ ಒಂದು ವೇಳೆ ನನಗೆ ಅವಕಾಶ ಕೊಟ್ಟರೆ ನಾನು ರಾಜ್ಯಾಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತೇನೆ. ಆದರೆ ಸದ್ಯ ಇರುವ ಹಾಲಿ ಅಧ್ಯಕ್ಷರನ್ನು ಬದಲಿಸಿ ಎಂದು ಒತ್ತಾಯ ಮಾಡಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಿಎಸ್ ಯಡಿಯೂರಪ್ಪ ಅವರ ಗರಡಿಯಲ್ಲಿ ಬೆಳೆದಿದ್ದೇನೆ. 224 ಕ್ಷೇತ್ರಗಳಲ್ಲೂ ಸಂಘಟನೆ ಮಾಡಿ ಬಂಡಾಯ ಶಮನ ಮಾಡುವೆ. 2028 ರಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲು ಕೆಲಸ ಮಾಡುತ್ತೇನೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಆಶೀರ್ವಾದ ಬೇಕಾಗಿದೆ. ಒಂದು ವೇಳೆ ಹೈಕಮಾಂಡ್ ಬದಲಾವಣೆ ಮಾಡಿದರೆ ನಾನು ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಿದ್ಧನಿದ್ದೇನೆ ಎಂದರು.