ಬೆಳಗಾವಿ: ಕಾವೇರಿ ವಿಚಾರವಾಗಿ ಪ್ರತಿಭಟನೆ ಮಾಡುವುದಕ್ಕೆ ನಾನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. ಆದರೆ, ಅದನ್ನೇ ನೆಪ ಮಾಡಿಕೊಂಡು ಇಡೀ ರಾಜ್ಯ ಬಂದ್ ಮಾಡುವುದು ಸರಿಯಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಜಿಲ್ಲೆಯ ಅಥಣಿ ತಾಲೂಕಿನ ನಂದಗಾವ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗುವ ದೃಷ್ಟಿಯಿಂದ ಬಂದ್ ಮಾಡಬಾರದು, ಬಂದ್ ಮಾಡುವುದರಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ, ಸಂವಿಧಾನದ ಬದ್ಧವಾಗಿ ಸರ್ಕಾರದ ಗಮನ ಸೆಳೆಯುವುದಕ್ಕೆ ಪ್ರತಿಭಟನೆ ಮಾಡಲಿ. ಕಾವೇರಿ ವಿಚಾರವಾಗಿ ತಮಿಳುನಾಡಿಗೆ ಮನವರಿಕೆ ಮಾಡಲು ಪ್ರತಿಭಟನೆ ಮಾಡಲಿ, ಆದರೆ ಇಡೀ ರಾಜ್ಯ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಇದನ್ನು ನಾನು ಒಪ್ಪಲ್ಲ ಎಂದರು.
ಬಿಜೆಪಿ – ಜೆಡಿಎಸ್ ಮೈತ್ರಿ ವಿರೋಧಿಸಿ ಆ ಪಕ್ಷಗಳ ಮುಖಂಡರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಮಾತನಾಡಿ, ಕಾಲ ಕೂಡಿಬರಬೇಕು, ಲೋಕಸಭೆ ಚುನಾವಣೆ ಸಮೀಪ ಬಂದಾಗ ಬಹಳಷ್ಟು ಜನ ಹಾಲಿ ಮತ್ತು ಮಾಜಿ ಶಾಸಕರು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಕ್ಕೆ ಆಸಕ್ತಿಯನ್ನು ಹೊಂದಿದ್ದಾರೆ. ರಮೇಶ್ ಕತ್ತಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯಾಗಿಲ್ಲ, ಕಾಲ ಕೂಡಿಬಂದಾಗ ಅದರ ನಾವು ಅಲೋಚನೆಯನ್ನು ಮಾಡುತ್ತೇವೆ ಎಂದರು.