ಮೈಸೂರು : ಕೆಆರ್‌ಎಸ್ ರಸ್ತೆಗೆ ದಾಖಲೆಗಳಲ್ಲಿ ಪ್ರಿನ್ಸಸ್ ರಸ್ತೆ ಎಂದು ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು.
ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ಕುರಿತು ಆ ರಸ್ತೆಗೆ ಪ್ರಿನ್ಸೆಸ್ ಎಂದು ಮಹಾರಾಜರ ಕಾಲದ ಹೆಸರಿತ್ತು ಅನ್ನುವುದಾದರೇ ಬದಲಾವಣೆ ಮಾಡುವುದು ಬೇಡ. ಇದಕ್ಕೆ ನನ್ನ ತಕರಾರು ಇಲ್ಲ. ಆ ಹೆಸರು ಬದಲಾವಣೆ ಮಾಡುವುದು ಬೇಡ ಎಂದರು.ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರಿಡುವುದು ಬೇಡ ಎಂದು ಸ್ಥಳೀಯ ಶಾಸಕ ಹರೀಶ್ ಗೌಡ ಅವರಲ್ಲಿ ನಾನೇ ಮನವಿ ಮಾಡುತ್ತೇನೆ. ಆ ರಸ್ತೆಗೆ ಯಾವುದೇ ಹೆಸರಿಲ್ಲ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಹೆಸರು ಇಡಬಹುದು ಎಂದು ಹೇಳಿ ಈ ವಿವಾದವನ್ನು ಇಲ್ಲಿಗೆ ಮುಗಿಸೋಣ ಎಂದರು.
ಮೈಸೂರಿಗೆ ಮಹಾರಾಜರ ಕೊಡುಗೆ ಬಹಳಷ್ಟಿದೆ. ಹಾಗೆಯೇ ಜನಪ್ರತಿನಿಧಿಗಳ ಕೊಡುಗೆಯೂ ಇದೆ. ಆದರೆ, ಇಟ್ಟಿರುವ ಹೆಸರನ್ನು ಬದಲಾಯಿಸುವ ದಾಷ್ಟ್ಯ ನಮಗೆ ಬೇಡ. ಹೊಸ ಬಡಾವಣೆ ಮಾಡಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿಟ್ಟರೇ ಅರ್ಥಪೂರ್ಣ ಆಗುತ್ತದೆ ಎಂದರು.
ಮೈಸೂರಿನ ಕಲಾಮಂದಿರದ ಮುಂಭಾಗ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಕಳೆದ ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ .ಆದರೆ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಪ್ರತಿಮೆ ಹಾಕಲು ಬಿಡುತ್ತಿಲ್ಲ. ಈಗಾಗಲೇ ೨೫ ಲಕ್ಷರೂ. ಖರ್ಚು ಮಾಡಿ ಪ್ರತಿಮೆ ನಿರ್ಮಿಸಲಾಗಿದೆ. ಆದರೆ, ಮೈಸೂರಿನಲ್ಲಿ ಕೆಂಪೇಗೌಡ ಪ್ರತಿಮೆ ಮಾಡುವುದಕ್ಕೆ ಸಿದ್ದರಾಮಯ್ಯ ತಡೆದರು ಎಂದು ದೂರಿದರು.
ನಾನು ಕಾಂಗ್ರೆಸ್ ಸೇರುತ್ತೇನೆ, ಸಿದ್ದರಾಮಯ್ಯ ಪರವಾಗಿ ಪ್ರತಾಪ ಸಿಂಹ ಸಾಫ್ಟ್ ಆಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಸ್ಪಷ್ಟವಾಗಿ ಹೇಳುತ್ತೇನೆ. ಕಳೆದ ೧೧ ವರ್ಷಗಳಿಂದ ಸಿದ್ದರಾಮಯ್ಯ ಅವರನ್ನ ಸೈದ್ಧಾಂತಿಕವಾಗಿ, ಧರ್ಮದ ವಿಚಾರವಾಗಿ ವಿರೋಧ ಮಾಡುತ್ತಾ ಬಂದಿದ್ದೇನೆ. ಸಿದ್ದರಾಮಯ್ಯ ಜಾತಿವಾದದ ಬಗ್ಗೆ ಕಡಾಖಂಡಿತವಾಗಿ ವಿರೋಧ ಮಾಡಿದವನು ಪ್ರತಾಪ ಸಿಂಹ ಒಬ್ಬನೇ. ಸಿದ್ದರಾಮಯ್ಯ ಅವರ ಕೆಲ ಪ್ರಯತ್ನಗಳನ್ನು ನಿಷ್ಪಲ ಮಾಡಿದ್ದೇನೆ. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ಸಿದ್ದರಾಮಯ್ಯ ಮುಂದಾಗಿದ್ದರು. ಈ ವೇಳೆ ಬೊಮ್ಮಾಯಿ ಸರ್ಕಾರದಲ್ಲಿ ೩೧೧ ಕೋಟಿ ರೂ. ಹಣ ಕೊಡಿಸಿ ಏರ್‌ಪೋರ್ಟ್‌ಗೆ ಹೆಸರಿಡಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿಸಿದೆ ಎಂದರು.
ಪ್ರತಾಪ್ ಸಿಂಹ ಕಾಂಗ್ರೆಸ್ ಸೇರುತ್ತಾರೆ ಎಂಬ ಕೆಲವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ರಾಜಕಾರಣಕ್ಕೆ ಬಂದಿರುವನು. ನನ್ನ ನಿಷ್ಟೆ ಹಾಗೂ ಬದ್ಧತೆ ಬಗ್ಗೆ ಚರ್ಚೆ ಮಾಡಲು ಹೋಗಬೇಡಿ. ನಾನು ಕಡೆಯವರೆಗೆ ಬಿಜೆಪಿಯ ಇರುತ್ತೇನೆ. ಪ್ರತಾಪಸಿಂಹನಿಗೆ ಕಾಂಗ್ರೆಸ್‌ಗೆ ಹೋಗುವ ಅನಿವಾರ್ಯತೆ ಬಂದಿಲ್ಲ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುವ ಅನಿವಾರ್ಯತೆ ಬೇರೆಯವರಿಗೆ ಇದೆ. ನಮ್ಮಪ್ಪ ಜನಸಂಘದಲ್ಲಿದ್ದರು. ನಾನು ಜನಸಂಘದ ಹೊಸ ಅವತಾರ ಬಿಜೆಪಿಯಲ್ಲಿದ್ದೇನೆ ಎಂದು ಕಿಡಿಕಾರಿದರು.
ವರುಣ ವಿಧಾನಸಭೆ ಚುನಾವಣೆ ವೇಳೆ ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ ಎರಡು ಕೇಸ್ ಹಾಕಿಸಿzರೆ. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ೫ ಕೇಸ್ ಹಾಕಿಸಿದ್ದಾರೆ. ಮೂರು ತಿಂಗಳಿನಲ್ಲಿ ಯಾವ ನಾಯಕನಿಗೂ ೫ ಎಫ್‌ಐಆರ್ ಆಗಿಲ್ಲ. ಸಿದ್ದರಾಮಯ್ಯ ಹಿಂದೂ ವಿರೋಧಿ ಮತ್ತು ಜಾತಿ ವಾದಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ ಸಿಂಹ ಬಕೆಟ್ ಹಿಡಿಯುತ್ತಿದ್ದಾರೆ ಎಂಬ ಕೌಟಿಲ್ಯ ರಘು ಹೇಳಿಕೆಗೆ ಪ್ರತಿಕ್ರಿಯಿಸಿ, ಸಭ್ಯತೆಯ ಗೆರೆ ಮೀರಿದಂತಹ ಕೆಲವು ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಯಾರು ಹೇಳಿಕೆ ಕೊಟ್ಟಿದ್ದಾರೆ ಅವರು ಯಾವ ಪಕ್ಷದಿಂದ ಬಂದಿದ್ದಾರೆ, ಸ್ಥಾನಮಾನಗಳಿಗಾಗಿ ಯಾವೆಲ್ಲ ದಾರಿ ಹಿಡಿದಿದ್ದರು ಎಂಬುದು ಇಡೀ ಮೈಸೂರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.