ನಿವೃತ್ತ ನೌಕರರು ಮತ್ತು ವಿದ್ಯಾರ್ಥಿಗಳ ಸನ್ಮಾನ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪ್ರತಿಭಾ ಪುರಸ್ಕಾರ ಮಾಡಿ ಸಾಧಕರ ಬೆನ್ನು ತಟ್ಟಿದರೆ ಅವರು ಭವಿಷ್ಯದಲ್ಲಿ ಮತ್ತಷ್ಟು ಎತ್ತರದ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದು ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ ಹೇಳಿದರು.
ಪಟ್ಟಣದ ಬಸವೇಶ್ವರ ಬಡಾವಣೆಯ ಶಿವಾನುಭವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ನಿವೃತ್ತ ನೌಕರರು ಮತ್ತು ವಿದ್ಯಾರ್ಥಿಗಳ ಸನ್ಮಾನ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ಮತ್ತು ಸಮುದಾಯದ ಹೆಸರಿನಲ್ಲಿ ಸಂಘಗಳನ್ನು ಸ್ಥಾಪನೆ ಮಾಡಿಕೊಂಡವರು ಪರಸ್ಪರ ಸಹಕಾರ ಮನೋಭಾವನೆಯಿಂದ ಕೆಲಸ ಮಾಡಿ ಗುರು ಹಿರಿಯರ ಮಾರ್ಗದರ್ಶನ ಪಡೆದು ಇತರರಿಗೆ ಮಾದರಿಯಾಗಬೇಕೆಂದ ಅವರು ಕಳೆದ 6 ವರ್ಷಗಳಿಂದ ಇತರ ಸಂಘ ಸಂಸ್ಥೆಗಳಿಗಿಂತ ಬಿನ್ನವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘದವರು ಇತರರಿಗೆ ಮಾದರಿ ಎಂದು ಪ್ರಶಂಸಿಸಿದರು.
ಸಮಾಜಮುಖಿ ಕೆಲಸ ಮಾಡುವ ಸಂಘ ಸಂಸ್ಥೆಗಳನ್ನು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಪ್ರೋತ್ಸಾಹಿಸಿದರೆ ಅವರು ಮುಂದೆ ಸಾಧಕರನ್ನು ಗುರುತಿಸಿ ಗೌರವಿಸಲು ಸಾಧ್ಯವಾಗಲಿದ್ದು ಈ ವಿಚಾರದಲ್ಲಿ ನಾನು ಸದಾ ನಿಮ್ಮ ಪರವಾಗಿ ನಿಲ್ಲುತ್ತೇನೆಂದು ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.
ಸಂಘದವರು ಪ್ರಸ್ತುತ ಮಾಡುತ್ತಿರುವ ಕೆಲಸಗಳ ಜತೆಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿಶೇಷ ಬೋಧನೆ ಹಾಗೂ ಇತರ ಶೈಕಣಿಕ ಏಳಿಗೆಗೆ ಪೂರಕವಾಗುವಂತಹ ಕಾರ್ಯಕ್ರಮ ಆಯೋಜಿಸಬೇಕೆಂದು ಸಲಹೆ ನೀಡಿದರು.
ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಶ್ರೀಗಳು ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಮಂಜುನಾಥ್, ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿದರು.
ಸಮಾಜ ಸೇವಕ ಚಿಕ್ಕವಡ್ಡರಗುಡಿಉಮಾಶಂಕರ್ ಸಂಘದ ವತಿಯಿಂದ ಹೊರ ತಂದಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಆನಂತರ ನಿವೃತ್ತ ನೌಕರರು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ, ಪ್ರಧಾನ ಕಾರ್ಯದರ್ಶಿ ಕೆ.ಬಿ.ಚಂದ್ರಶೇಖರ್, ಖಜಾಂಚಿ ಗಂಗಾಧರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಪ್ರಭು, ತಾಲೂಕು ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಂ. ಗಂಗಾಧರ್, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದ ಅಧ್ಯಕ್ಷ ವೈ.ಎನ್.ಚಂದ್ರಶೇಖರ್ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.