ಮೈಸೂರು: ಮುಡಾ ಪ್ರಕರಣದ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ವೀಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ವಿಚಾರಣೆಯ ಬಹುತೇಕ ಹಂತಗಳು ಪೂರ್ಣಗೊಂಡಿವೆ. ಆದಾಗ್ಯೂ ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿವೆ. ಎಲ್ಲವನ್ನೂ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಲೋಕಾಯುಕ್ತ ಎಸ್‌ಪಿ ಟಿ.ಎಸ್.ಉದೇಶ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಉತ್ತರಗಳನ್ನು ತಾಳೆ ಹಾಕಲಾಗುವುದು. ಒಂದೊಮ್ಮೆ ಏನಾದರೂ ಅನುಮಾನಗಳಿದ್ದಲ್ಲಿ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುತ್ತದೆ. ವಿಚಾರಣೆಯ ಅಂತಿಮ ವರದಿ ಸಲ್ಲಿಕೆಗೆ ಸಮಯಾವಕಾಶವಿದೆ ಎಂದರು.
ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ನ.25ರ ತನಕ ವಿಚಾರಣೆಯಲ್ಲಿನ ಪ್ರಗತಿ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದು, ನ್ಯಾಯಾಲಯದ ಸೂಚನೆ ಪಾಲಿಸಲಾಗುವುದು ಎಂದರು. ಮುಖ್ಯಮಂತ್ರಿ ವಿಚಾರಣೆ ವೇಳೆ ಲೋಕಾಯುಕ್ತ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಹಾಗೂ ಇನ್‌ಸ್ಪೆಕ್ಟರ್ ಲೋಕೇಶ್ ಜತೆಗಿದ್ದರು.