ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದೇಶದ ಪ್ರಗತಿಯಾಗಬೇಕಾದರೆ ಶಿಕ್ಷಣ ಕಲಿಕೆ ಮತ್ತು ಉತ್ತಮ ಆರೋಗ್ಯ ಪ್ರಮುಖವಾಗಿರುವುದರಿಂದ ನಾನು ಅವುಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಶ್ರೀ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಕಾಲೇಜಿನ ನವೀಕರಣ ಮಾಡಿ ಮೂಲಭೂತ ಸವಲತ್ತು ಕಲ್ಪಿಸಲು ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ಶಾಲಾ ವಾರ್ಷಿಕೋತ್ಸವ ಸಮಾರಂಭಗಳು ವಿದ್ಯಾರ್ಥಿಗಳ ಪ್ರತಿಬೆಯ ಪ್ರದರ್ಶನಕ್ಕೆ ವೇದಿಕೆಗಳಾಗಿದ್ದು ಎಲ್ಲರೂ ಅದರ ಸದ್ಬಳಕೆ ಮಾಡಿಕೊಂಡು ತಮ್ಮಲ್ಲಿರುವ ವಿಶೇಷತೆ ಪ್ರದರ್ಶಿಸಿ ಎಂದು ಸಲಹೆ ನೀಡಿದರು.
ಕಾಲೇಜು ದಿನಗಳ ಶೈಕ್ಷಣಿಕ ಅಧ್ಯಯನ ವಿದ್ಯಾರ್ಥಿಗಳ ಬದುಕಿನ ಮಹತ್ತರ ಘಟ್ಟದ ಕಾಲವಾಗಿದ್ದು ಈ ಸಮಯದಲ್ಲಿ ನೀವು ಉಪನ್ಯಾಸಕರು, ಪೋಷಕರ ಮಾರ್ಗದರ್ಶನ ಪಡೆದುಕೊಂಡು ಚೆನ್ನಾಗಿ ಕಲಿತು ಉತ್ತಮ ಹೆಸರು ಗಳಿಸಬೇಕೆಂದು ಕಿವಿಮಾತು ಹೇಳಿದರು.
ಆಟ ತುಂಟಾಟದ ಜತೆಗೆ ಪಾಠ ಪ್ರವಚನಗಳ ಕಡೆಗೆ ಹೆಚ್ಚಾಗಿ ಗಮನಹರಿಸಿ ಭವಿಷ್ಯದ ಬದುಕು ರೂಪಿಸಿಕೊಂಡು ಭವ್ಯ ಭಾರತದ ಮುಂದಿನ ಪೀಳಿಗೆಯ ಪ್ರಜೆಗಳಾದ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಬೇಕೆಂದರು.
ಕ್ಷೇತ್ರದ ಶೈಕ್ಷಣಿಕ ಏಳಿಗೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತು ಮತ್ತು ಅನುಕೂಲ ಕಲ್ಪಿಸಲು ನಾನು ಬದ್ದನಾಗಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಕಾಲೇಜಿನ ಕೀರ್ತಿ ಪತಾಕೆ ರಾಜ್ಯ ಮಟ್ಟದಲ್ಲಿ ಹಾರುವಂತೆ ಮಾಡಬೇಕೆಂದರು.
ಸುಲಭ ಮತ್ತು ವಾಮ ಮಾರ್ಗದಲ್ಲಿ ಸಾಧನೆ ಮಾಡಿ ಯಶಸ್ಸು ಗಳಿಸಲು ಆಗದು ಹಾಗಾಗಿ ಕಠಿಣ ಪರಿಶ್ರಮ ಹಾಗೂ ಸವಾಲುಗಳನ್ನು ಎದುರಿಸಿದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಾಗಲಿದ್ದು ಇದನ್ನು ವೃತದಂತೆ ಪಾಲಿಸಬೇಕೆಂದು ನುಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ಐದು ಕೋಟಿ ಹಣ ಮಂಜೂರಾಗಿದ್ದು ಶಿಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಪ್ರಕಟಿಸಿದ ಶಾಸಕರು ಶೈಕ್ಷಣಿಕ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಸಮಸ್ಯೆ ಗಳಿದ್ದರು ಶಿಕ್ಷಕ ಭಾಂದವರು ನನ್ನನ್ನು ನೇರವಾಗಿ ಭೇಟಿ ಮಾಡಿ ದೂರು ನೀಡಬಹುದು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಾಕರಾಜು, ಪ್ರಾಂಶುಪಾಲ ಎಂ.ಸಿ.ಚಂದ್ರಶೇಖರ್, ಉಪ- ಪ್ರಾಂಶುಪಾಲ ಕೆ.ವೈ.ನಾರಾಯಣಪ್ರಸಾದ್ ಮಾತನಾಡಿದರು. ಈ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮೈಸೂರು ಕೃಷ್ಣ ಮೂರ್ತಿ ಪ್ರಧಾನ ಭಾಷಣ ಮಾಡಿದರು. ಪುರಸಭೆ ಸದಸ್ಯ ನಟರಾಜು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮುರುಳಿಧರ, ನೇತ್ರಾವತಿ, ದಶರಥ, ಶಿವಣ್ಣನಾಯಕ, ರಮೇಶ್ ಮತ್ತಿತರರು ಇದ್ದರು.