ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ರಾಜಕೀಯವಾಗಿ ಬೆಳಗಾವಿಯಲ್ಲಿ ನೆಲ ಕಚ್ಚಿರುವ ಪುಂಡ ಎಂಇಎಸ್ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಮುಗ್ಧ ಮರಾಠಿ ಜನರನ್ನು ಎತ್ತಿಕಟ್ಟಿ ಕನ್ನಡಿಗರು ಸಂಭ್ರಮದಿಂದ ಆಚರಿಸುವ ಕರ್ನಾಟಕ ರಾಜ್ಯೋತ್ಸವದ ವಿರುದ್ಧ ಕರಾಳ ದಿನಾಚರಣೆ ಆಚರಿಸಿಯೇ ಆಚರಿಸುತ್ತೇವೆ ಎಂದು ಕತ್ತಲ ಸಭೆಯಲ್ಲಿ ಪುಂಡಾಟಿಕೆ ಮೆರೆದಿದ್ದಾರೆ.
ಜಿಲ್ಲಾಡಳಿತ ಕರ್ನಾಟಕ ರಾಜ್ಯೋತ್ಸವದ ವೇಳೆ ಎಂಇಎಸ್ ನ ಕರಾಳ ದಿನಾಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ ಮೇಲೆ ಬಾಲ ಮುದುಡಿಕೊಂಡು ಕುಳಿತಿದ್ದ ಪುಂಡ ಎಂಇಎಸ್ ಕರವೇ ಕನ್ನಡ ದೀಕ್ಷಾ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ದೈರ್ಯ ತುಂಬಲು ಬಂದಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಂಇಎಸ್ ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು. ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಿ ಎಂದು ಕನ್ನಡಿಗರಿಗೆ ಕರೆ ನೀಡಿದ್ದರು.
ಇದನ್ನು ರಾಜಕೀಯ ಬಂಡವಾಳವಾಗಿಸಿಕೊಂಡ ಪುಂಡ ಎಂಇಎಸ್ ಮುಖಂಡ ಶುಭಂ ಸೇಳಕೆ ನಾರಾಯಣಗೌಡರ ವಿರುದ್ಧ ನಾಲಿಗೆ ಹರಿಬಿಟ್ಟು ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡು ಕೊನೆಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಷ್ಟಾದರೂ ಸಮ್ಮನೆ ಇರದ ಪುಂಡ ಎಂಇಎಸ್ ಮಂಗಳವಾರ ರಾತ್ರಿ ಬೆಳಗಾವಿಯ ಸಭಾಂಗಣ ಒಂದರಲ್ಲಿ ಸಭೆ ನಡೆಸಿ ಜಿಲ್ಲಾಡಳಿತ ಕರಾಳ ದಿನಕ್ಕೆ ಅನುಮತಿ ಕೊಡಲಿ, ಬಿಡಲಿ ನಾವು ಮಾತ್ರ ಕರಾಳ ದಿನಾಚರಣೆ ಮಾಡಿಯೇ ಮಾಡುತ್ತೇವೆ. ಬೆಳಗಾವಿಯೂ ನಮ್ಮದೆ ಇದೆ ಎಂದು ಪುಂಡಾಟ ಮೆರೆದಿರುವುದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.