Saturday, April 19, 2025
Google search engine

Homeಸ್ಥಳೀಯರೈತನಿಗೆ ಸಂಕಷ್ಟವಾದರೆ ದೇಶಕ್ಕೂ ಸಂಕಷ್ಟ

ರೈತನಿಗೆ ಸಂಕಷ್ಟವಾದರೆ ದೇಶಕ್ಕೂ ಸಂಕಷ್ಟ


ಮೈಸೂರು: ರೈತ ಸಂಕಷ್ಟಕ್ಕೆ ಸಲುಕಿದರೆ ದೇಶ ಸಂಕಷ್ಟಕ್ಕೆ ಸಿಲುಕುತ್ತದೆ. ಸಮೂಹ ಮಾಧ್ಯಮಗಳು ಹಾಗೂ ಕೃಷಿ ವಿಸ್ತರಣಾ ಚಟುವಟಿಕೆಗಳ ಮೂಲಕ ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಹೆಚ್ಚು ಮಾಹಿತಿ ಪ್ರಚುರಪಡಿಸಿ ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ತಿಳಿಸಿದರು.
ನಗರದ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಾವಯ ಸಂಪದ ಸಮಗ್ರ ಸಾವಯವ ಕೃಷಿ ಬದುಕಿನ ಬೇಸಾಯ ಚಿತ್ರಣ ಕುರಿತ ಬಾನುಲಿ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ೫೨ ವಾರಗಳ ಸಾವಯವ ಸಂಪದ ಕಾರ್ಯಕ್ರಮ ರೈತರಿಗೆ ಬಹಳ ಉಪಯುಕ್ತವಾದ ರೀತಿಯಲ್ಲಿ ಮೂಡಿಬರಲಿದ್ದು, ಕಾರ್ಯಕ್ರಮದಲ್ಲಿ ಪ್ರಗತಿಪರ ಸಾವಯವ ಕೃಷಿಕರೊಟ್ಟಿಗೆ ಸಂವಾದ, ಸಾವಯವ ಕೃಷಿ ಮಹತ್ವ ಮತ್ತು ಅವಕಾಶಗಳು, ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶಗಳ ನಿರ್ವಹಣೆ, ಸಾವಯವ ಕೃಷಿಯಿಂದ ಆಗುವ ದೀರ್ಘಾವಧಿ ಲಾಭಗಳು, ವಿಜ್ಞಾನಿಗಳು ಹಾಗೂ ತಜ್ಞರಿಂದ ಮಾಹಿತಿ ಹಾಗೂ ಚರ್ಚೆ, ಸಾವಯವ ಕೃಷಿಯಲ್ಲಿ ಸಿರಿಧಾನ್ಯಗಳ ಮಹತ್ವ ಸೇರಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.
ಆಕಾಶವಾಣಿ ಮತ್ತು ಸಮೂಹ ಮಾಧ್ಯಮಗಳು ಕಡಿಮೆ ಸಮಯದಲ್ಲಿ ಹೆಚ್ಚು ಜನರ ಮನಮುಟ್ಟುವಂತೆ ಮಾಹಿತಿ ತಲುಪಿಸುತ್ತವೆ. ೧೯೪೭ರಲ್ಲಿ ಸ್ವತಂತ್ರ ಪಡೆದಾಗ ಮೂರು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ದೇಶದಲ್ಲಿತ್ತು. ಅಂದು ಆಹಾರಕ್ಕಾಗಿ ಬೇರೆ ದೇಶಗಳತ್ತ ಮುಖ ಮಾಡಿದ್ದೆವು. ಇಂದು ಮುಂದಿನ ವರ್ಷಕ್ಕೂ ಆಗುವ ಆಹಾರ ಧಾನ್ಯಗಳ ಶೇಖರಣೆ ನಮ್ಮಲಿದೆ. ಅಲ್ಲಿಂದ ನಡೆದ ಕೃಷಿ ಕ್ರಾಂತಿ ಹಾಗೂ ಬದಲಾವಣೆಯೇ ಇಂದಿನ ಸ್ಥಿತಿಗೆ ಕಾರಣವಾಗಿವೆ. ಬೆಳೆಗಳ ಉತ್ಪಾದಕತೆ ಮತ್ತು ಉತ್ಪಾದನೆಗಾಗಿ ಕೃಷಿ ವಿಜ್ಞಾನಿಗಳು ಸಂಶೋಧನೆ ಕೈಗೊಂಡು ಹೆಚ್ಚು ಇಳುವರಿ ನೀಡುವ ತಳಿಗಳನ್ನು ರೈತರ ಮುಂದಿಟ್ಟರು. ಬೆಳೆ ಬೆಳೆಯಲು ಅವಶ್ಯಕತೆ ಇರುವ ಪೋಷಕಾಂಶಗಳನ್ನು ಪೂರೈಸಲು ಕೊಟ್ಟಿಗೆ ಗೊಬ್ಬರ ಹಾಕಬೇಕಿತ್ತು ಆದರೆ ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಇಂದು ನಾವು ಸೇವಿಸುತ್ತಿರುವ ಆಹಾರ ರಾಸಾಯನಿಕಯುಕ್ತವಾಗಿದೆ ಎಂದು ತಿಳಿಸಿದರು.
ಇಂದು ಆಹಾರ ಉತ್ಪಾದನೆಯಲ್ಲಿ ನಮ್ಮ ರಾಷ್ಟ್ರ ಸ್ವಾವಲಂಬಿಯಾಗಿದೆ ಇದರ ಯಶಸ್ಸು, ದೇಶದ ಕೃಷಿಕರಿಗೆ ತಲುಪಬೇಕು. ರಾಸಾಯನಿಕ ಗೊಬ್ಬರಗಳ ಬಳಕೆ ಭೂಮಿಯ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೃಷಿ ಕೂಲಿ ಕಾರ್ಮಿಕರ ಅಲಭ್ಯತೆಯಿಂದ ಕಳೆನಾಶಕಗಳ ಬಳಕೆ ಹೆಚ್ಚಾಗಿ ಕ್ರಮೇಣ ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಸಾವಯವ ಕೃಷಿಯ ಅವಶ್ಯಕತೆ ಬಹಳಷ್ಟಿದೆ. ಸಾವಯುವ ಕೃಷಿ ಮಹತ್ವ ಸಾರಲು ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಸಾವಯವ ಕೃಷಿಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ರೈತರ ಆರ್ಥಿಕ ಪರಿಸ್ಥಿತಿಗೆ ಹೊಡೆತ ಬಿಳದಂತೆ ರೈತ ಯೋಜನೆಗಳು ಸಹಾಯಕಾರಿಯಾಗಬೇಕು ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ವಿಸ್ತರಣಾ ನಿರ್ದೇಶಕ ಡಾ.ದೇವಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಕೃಷಿ ಪದಾರ್ಥಗಳಿಗೆ ಬೇಡಿಕೆಯಿದೆ. ವಿಶ್ವದಲ್ಲಿ ೧೯೧ ದೇಶಗಳು ಸಾವಯುವ ಕೃಷಿ ಮಾಡುತ್ತಿವೆ. ಸಾವಯವ ಕೃಷಿ ಪದ್ಧಾರ್ಥಗಳನ್ನು ರಫ್ತು ಮಾಡಲು ಹೆಚ್ಚಿನ ಅವಕಾಶಗಳಿವೆ. ಭಾರತ ಮತ್ತು ಆಫ್ರಿಕಾದ ದೇಶಗಳು ಸಾವಯವ ಕೃಷಿ ಪದ್ಧತಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು, ವಿಶ್ವದಲ್ಲಿ ೩೭ ಲಕ್ಷ ಜನರು ಸಾವಯವ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ೭೬.೪ ಮಿಲಿಯನ್ ಹೆಕ್ಟರ್ ನಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಜರ್ಮನ್ ದೇಶವು ಅತಿ ಹೆಚ್ಚು ಸಾವಯವ ಉತ್ಪನ್ನಗಳನ್ನು ಬಳಕೆ ಮಾಡುವ ದೇಶವಾಗಿದೆ. ಸಾವಯವ ಕೃಷಿ ಮಾಡುವ ಪಟ್ಟಿಯಲ್ಲಿ ವಿಶ್ವದಲ್ಲಿಯೇ ಭಾರತ ೪ ನೇ ಸ್ಥಾನದಲ್ಲಿದ್ದು, ೨.೮ ಮಿಲಿಯನ್ ಹೆಕ್ಟರ್ ದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಭಾರತದಲ್ಲಿ ೪೪.೩ ಲಕ್ಷ ರೈತರು ಸಾವಯುವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಸಿಕ್ಕಿಂ ರಾಜ್ಯ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಮಾಹಿತಿ ನೀಡಿದರು.
ಸಾವಯವ ಕೃಷಿ ಪದ್ಧತಿಯ ಅನುಸರಣೆಯಲ್ಲೂ ರೈತರು ಉತ್ಪಾದನಾ ಸವಾಲುಗಳು, ಕೊಯ್ಲೋತರ ಸವಾಲುಗಳು, ಮಾರುಕಟ್ಟೆ ಸವಾಲುಗಳು, ಸಾವಯವ ದೃಢೀಕರಣ ಸವಾಲುಗಳು ಹಾಗೂ ತಾಂತ್ರಿಕ ಸೌಲಭ್ಯದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೂ ಪ್ರಾರಂಭದ ಸಮಸ್ಯೆಗಳನ್ನು ಲೆಕ್ಕಿಸದೆ, ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ರೈತರು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ನಾಗರಾಜು, ಆಕಾಶವಾಣಿ ನಿಲಯದ ಮುಖ್ಯಸ್ಥ ಹಾಗೂ ಸಹಾಯಕ ನಿರ್ದೇಶಕ ಎಸ್.ಎಸ್.ಉಮೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಅಶೋಕ್ ಕುಮಾರ್.ಡಿ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಹೆಚ್.ಯೋಗೇಶ್, ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ.ರಾಮಚಂದ್ರ ಸೇರಿದಂತೆ ರೈತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular