ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ವಿಘ್ನ ಎದುರಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾದ ಶೂಟಿಂಗ್ ವೇಳೆ ನಿಯಮ ಉಲ್ಲಂಘನೆ ಮಾಡಿದ ಆರೋಪ ಎದುರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರತಂಡದವರು ಒಂದು ವೇಳೆ ಷರತ್ತು ಉಲ್ಲಂಘನೆ ಮಾಡಿದ್ದರೆ ಚಿತ್ರೀಕರಣವನ್ನು ನಿರ್ಬಂಧಿಸಿ, ಕ್ರಮ ಜರುಗಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಯಸಳೂರು ವಲಯದ ಶನಿವಾರ ಸಂತೆ ಬಳಿ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡ ಶೂಟಿಂಗ್ ನಡೆಸುತ್ತಿದೆ. ಇದಕ್ಕೆ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ವಿಧಾನಸೌಧದಲ್ಲಿ ಇಂದು ಈಶ್ವರ ಖಂಡ್ರೆ ಅವರು ಉತ್ತರ ನೀಡಿದರು.
‘ಗವಿಬೆಟ್ಟ ಮತ್ತು ಸುತ್ತಮುತ್ತಲ ಪರಿಭಾವಿತ ಅರಣ್ಯದ ಅಂಚಿನ ಗೋಮಾಳದಲ್ಲಿ 23 ದಿನ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ನಡೆಸಲು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯವರು ಅನುಮತಿ ಕೋರಿದ್ದರು. ಇದಕ್ಕೆ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಷರತ್ತುಬದ್ಧ ಅನುಮತಿ ನೀಡಿದ್ದಾರೆ ಎಂದರು. ಆದರೆ ಕಾಂತಾರ ಚಿತ್ರತಂಡ ಚಿತ್ರೀಕರಣದ ವೇಳೆ ಸ್ಫೋಟಕ ಬಳಸುತ್ತಿದ್ದು, ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿರುತ್ತದೆ’ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
‘ಈ ವಿಷಯ ತಿಳಿಯುತ್ತಿದ್ದಂತೆಯೇ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ತಿಳಿಸಿದ್ದೇನೆ. ಚಿತ್ರತಂಡದಿಂದ ಒಂದೊಮ್ಮೆ ಷರತ್ತುಗಳ ಉಲ್ಲಂಘನೆ ಆಗಿದ್ದರೆ, ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಯಾವುದೇ ಹಾನಿ ಆಗಿದ್ದಲ್ಲಿ ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲು ಮತ್ತು ಕ್ರಮ ಜರುಗಿಸಲು ಸೂಚಿಸಿದ್ದೇನೆ’ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.