ಮೈಸೂರು: ಆಹಾರದ ಬಗ್ಗೆ ಅರಿವಿದ್ದರೆ ಜಗತ್ತಿನ ಜ್ಞಾನವೂ ನಮ್ಮದಾಗುತ್ತದೆ. ದೇಹಕ್ಕೆ ಒಗ್ಗುವ ನಮ್ಮದೇ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ಪಾಲಿಸಬೇಕು. ಆಗ ಮಾತ್ರ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಎಂದು ವಿಜ್ಞಾನಿ ಡಾ.ಚಿಂದಿ ವಾಸುದೇವಪ್ಪ ತಿಳಿಸಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಆಯೋಜಿಸಿರುವ ಒಂದು ವಾರ, ಒಂದು ಪ್ರಯೋಗಾಲಯ ಆಹಾರ ಸಂಶೋಧನೆಯ ಸಂಭ್ರಮೋತ್ಸವದಲ್ಲಿ ಬುಧವಾರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ತಿನಿಸಿನಲ್ಲಿರುವ ಪೌಷ್ಟಿಕಾಂಶದ ಅರಿವಿದ್ದರೆ ಆಹಾರ ನಷ್ಟಗೊಳಿಸುವುದಿಲ್ಲ. ಆಹಾರ ಕೇವಲ ಹಸಿವನ್ನು ನೀಗಿಸುವುದಿಲ್ಲ, ನಮ್ಮ ಆರೋಗ್ಯವನ್ನೂ ಕಾಯುತ್ತದೆ ಎಂಬ ಎಚ್ಚರ ಇರಬೇಕು. ಆಹಾರವೇ ಔಷಧ ಎಂಬದನ್ನು ಅರಿಯಬೇಕು. ಪೌಷ್ಟಿಕ ಆಹಾರವ ಸೇವಿಸಬೇಕು. ಆರೋಗ್ಯವನ್ನು ಹಾಳು ಮಾಡುವ ರಾಸಾಯನಿಕಯುಕ್ತ ಕುರುಕಲು ತಿಂಡಿಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ತಿನ್ನುವ ಆಹಾರದಲ್ಲಿರುವ ಪೋಷಕಾಂಶ ಯಾವುದು ಯಾವ ಪ್ರೋಟಿನ್ ಯಾವ ಆಹಾರದಲ್ಲಿರುತ್ತದೆ ನಮ್ಮ ದೇಹದ ಯಾವ ಅಂಗವು ಯಾವ ಪ್ರೋಟೀನ್ ಬೇಡುತ್ತದೆ ಎಂಬ ಕುತೂಹಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ವಿಟಮಿನ್‌ಗಳ ಅರಿವಿದ್ದರೆ ನಮಗೆ ಯಾವ ರೋಗಗಳೂ ಸುಳಿಯುವುದಿಲ್ಲ. ಮೀನಿನಲ್ಲಿ ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಜಿಂಕ್ ನಂತರ ಖನಿಜಾಂಶಗಳು ಇರುತ್ತವೆ. ವಿಟಮಿನ್ ಎ ದೃಷ್ಟಿಯನ್ನು ಹೆಚ್ಚಿಸುತ್ತದೆ ಎಂದು ಉದಾಹರಿಸಿದರು.
ಆರೋಗ್ಯ ಪೂರ್ಣ ದೇಶವನ್ನು ನಿರ್ಮಿಸಲು ಮಕ್ಕಳಿಗಾಗಿ ಮಧ್ಯಾಹ್ನದ ಊಟವನ್ನು ಸರ್ಕಾರ ನೀಡುತ್ತಿದೆ. ಮಕ್ಕಳ ಪೌಷ್ಟಿಕಾಂಶ ಹೆಚ್ಚಳಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೀಗಾಗಿಯೇ ದೇಶದ ಭವಿಷ್ಯ ಮಕ್ಕಳಲ್ಲಿದೆ ಎನ್ನುತ್ತಾರೆ. ಮಕ್ಕಳು ಪ್ರಕೃತಿ, ಕೃಷಿ, ಆಹಾರ ಸೇರಿದಂತೆ ನಿತ್ಯ ಜೀವನದಲ್ಲಿ ಎದುರಾಗುವ ಸನ್ನಿವೇಶಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ನಮ್ಮ ಆಹಾರವು ಸುಲಭವಾಗಿ ತಟ್ಟೆಯ ಮುಂದೆ ಬಂದಿರುವುದಿಲ್ಲ. ಹಲವು ಜನರ ಬೆವರಿನ ಶ್ರಮವಿರುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣಸಿಂಗ್ ಮಾತನಾಡಿ, ದೇಹಕ್ಕೆ ೫೦ ಪೌಷ್ಟಿಕಾಂಶಗಳ ಅಗತ್ಯವಿದೆ. ಯಾವ ತಿನಿಸಿನಲ್ಲಿ ಯಾವ ಪೌಷ್ಟಿಕಾಂಶವಿದೆ ಎಂಬುದನ್ನು ಅರಿಯಬೇಕು. ವೈಚಾರಿಕ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಒಂದೇ ಆಹಾರದಲ್ಲಿ ಎಲ್ಲ ಪೌಷ್ಟಿಕಾಂಶಗಳು ಇರುವುದಿಲ್ಲ. ಹೀಗಾಗಿ, ನಮ್ಮ ತಿನಿಸಿನ ತಟ್ಟೆಯು ಕಾಮನಬಿಲ್ಲಿನಂತೆ ಹಣ್ಣು, ತರಕಾರಿ, ಸೊಪ್ಪು ಸೇರಿದಂತೆ ಎಲ್ಲವನ್ನೂ ಒಳಗೊಂಡಿರಬೇಕು ಎಂದರು.