ದಾವಣಗೆರೆ: ಬಿ ಎಸ್ ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್, ಸವದಿ ಕಡೆಗಣಿಸಿದ್ದೆ ಬಿಜೆಪಿ ಹೀನಾಯವಾಗಿ ಸೋಲಲು ಕಾರಣ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಸ್ವಪಕ್ಷದವರ ವಿರುದ್ಧವೇ ಹರಿಹಾಯ್ದಿದ್ದಾರೆ.
ಬಿಎಸ್ ವೈ ರನ್ನು ಸಿಎಂ ಹುದ್ದೆಯಿಂದ ಇಳಿಸಿದ್ದರಿಂದ ಬಿಜೆಪಿಗೆ ನಷ್ಟವಾಯಿತು. ಇದರಿಂದ ಬಿಎಸ್ ವೈಗೆ ಯಾವುದೇ ವೈಯಕ್ತಿಕ ನಷ್ಟವಾಗಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಈಗ ಸ್ಥಿತಿ ಬರುತ್ತಿರಲಿಲ್ಲ. ನಾನು ಪಕ್ಷದ ವಿರುದ್ಧವಾಗಿ ಮಾತಾಡುವುದಿಲ್ಲ. ಪಕ್ಷ ನನಗೆ ತಾಯಿ ಸಮಾನ. ಕೆಲವು ದೌರ್ಬಲ್ಯಗಳ ಬಗ್ಗೆ ನಾನು ಮಾತನಾಡಬೇಕಾಗುತ್ತದೆ. ಆರು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿದ್ದಿರಿ. ಯಾವ ಕಾರಣಕ್ಕಾಗಿ ಸಚಿವ ಸ್ಥಾನ ಹಾಗೇ ಬಿಟ್ಟಿದ್ರಿ..? ಹಣ ಮಾಡಲು ಒಬ್ಬರು ಸಚಿವರಿಗೆ ಎರೆಡೆರೆಡು ಖಾತೆ ನೀಡಿದ್ರಾ..? ಎಂದು ಕಿಡಿಕಾರಿದರು.
ಅಧಿಕಾರಕ್ಕೆ ಬರಲು ಇವರಿಗೆ ಬಿಎಸ್ ವೈ ಮುಖ ಬೇಕು. ಅಧಿಕಾರದಲ್ಲಿ ಎಂಜಾಯ್ ಮಾಡಲು ಇವರಿಗೆ ಬಿಎಸ್ ವೈ ಬೇಡ. 70 ಹೊಸಬರಿಗೆ ಅವಕಾಶ ಅಂತಾ ನಿಮ್ಮಾ ಚೇಲಾಗಳಿಗೆ ಟಿಕೆಟ್ ಕೊಟ್ರಾ..? ಕಟೀಲು ಹಡಗು ಮುಳುಗಿದ ಮೇಲೆ ಮಾತಾಡ್ತಾರಾ. ಅಧಿಕಾರದಲ್ಲಿ ಇದ್ದಾಗಲೇ ಮಾಡದವರು ಈಗೇನು ಮಾಡುತ್ತಾರೆ ಎಂದು ಗುಡುಗಿದರು.
ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾದರೇ ತಪ್ಪೇನು ಇಲ್ಲ. ಹಾಗಂತ ನಾನು ವಿಜಯೇಂದ್ರ ಪರ ಬ್ಯಾಟ್ ಮಾಡುತ್ತಿಲ್ಲ. ಸೋಮಣ್ಣ ರಾಜ್ಯಾಧ್ಯಕ್ಷ ಆಗಬಾರದು ಅಂತಾ ಹೇಳಿದ್ದು ಯಾರು . ನಾನು ರಾಜ್ಯಾಧ್ಯಕ್ಷನಾಗಬಾರದಾ. ನನಗೂ ಸಾಮರ್ಥ್ಯ ಇದೆ. ಇವರಿಗಿಂತ 10ರಷ್ಟು ರಾಜ್ಯಪ್ರವಾಸ ಮಾಡುವ ಶಕ್ತಿ ನನಗೆ ಇದೆ ಎಂದು ಬಿಜೆಪಿ ಕೆಲ ನಾಯಕರಿಗೆ ತಿರುಗೇಟು ನೀಡಿದರು.
ಅಣ್ಣಾಮಲೈ ಅವರನ್ನು ಕರೆದುಕೊಂಡು ರಾಜ್ಯದ ಉಸ್ತುವಾರಿ ಮಾಡುತ್ತೀರಲ್ಲ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಎಲ್ಲರನ್ನು ಮುಗಿಸಿಬಿಟ್ಟಿರಲ್ಲ? ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದರು. ಆದರೆ ಅವರ ಎರಡೂ ಕೈಗಳನ್ನು ಕಟ್ಟಿ ಹಾಕಿದ್ದರು ಎಂದು ರೇಣುಕಾಚಾರ್ಯ ಆರೋಪಿಸಿದರು.