ಗುಂಡ್ಲುಪೇಟೆ: ಅಕ್ರಮವಾಗಿ ಜೂಜಾಟವಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಠಾಣೆ ಪೊಲೀಸರು ದಾಳಿ ನಡೆಸಿ 9 ಮಂದಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಬೆಳವಾಡಿ ಗ್ರಾಮದ ಹೊರ ವಲದ ಜಮೀನೊಂದರಲ್ಲಿ ನಡೆದಿದೆ.
ಬೆಳವಾಡಿ ಹೊರವಲದ ಬೊಮ್ಮಲಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡ ಕಲ್ಲುಕಟ್ಟೆಹಳ್ಳದ ಓಣಿಯಲ್ಲಿ ಜೂಜಾಟವಾಡುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 3,75,600 ರೂ. ಹಣದೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ವೈ.ಮುದ್ದುರಾಜ ಮತ್ತು ಸಬ್ ಇನ್ಸ್ ಪೆಕ್ಟರ್ ಕಿರಣ್, ಎಎಸ್‍ಐ ಮಹೇಶ್, ಪೇದೆಗಳಾದ ಶಿವಕುಮಾರ್, ರಂಗಸ್ವಾಮಿ, ಮಂಜುನಾಥ, ಹಸಗೂಲಿ ಶಶಿಧರ, ಲೋಕೇಶ್, ಸುರೇಶ್, ಮಹೇಶ್, ಕುಮಾರ್ ಪಾಲ್ಗೊಂಡಿದ್ದರು.