ಪಿರಿಯಾಪಟ್ಟಣ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಐದು ಜನರನ್ನು ಬೈಲಕುಪ್ಪೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಟಿಬೆಟಿಯನ್ ಒಂದನೇ ಕ್ಯಾಂಪಿನ ಟಿಸಿಎಸ್ ಕಾಂಪ್ಲೆಕ್ಸ್ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರ ಮೇಲೆ ಎಸ್ಪಿ ಸೀಮಾ ಲಾಟ್ಕರ್ ,ಏಎಸ್ಪಿ ನಂದಿನಿ ,ಡಿವೈಎಸ್ಪಿ ಮಹೇಶ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಬೈಲಕುಪ್ಪೆ ಠಾಣೆ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಅಪರಾಧ ವಿಭಾಗ ಸಬ್ ಇನ್ಸ್ಪೆಕ್ಟರ್ ಮಹಲಿಂಗಯ್ಯ ಮತ್ತು ಸಿಬ್ಬಂದಿ ಚೇತನ್ ಕುಮಾರ್, ಕುಮಾರಸ್ವಾಮಿ, ಮುದ್ದುರಾಜು, ರವಿಕುಮಾರ್, ರವಿ, ಮಹದೇವಪ್ಪ, ವೀರೇಂದ್ರ, ಸುರೇಶ್, ಗೋಪಾಲ, ರಾಜೇಶ್, ಪ್ರದೀಪ್ ದಾಳಿ ನಡೆಸಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಒರಿಸ್ಸಾ ಮೂಲದ ಬಿಕ್ರಮ್ ನಾಯಕ್, ಕುಶಾಲನಗರ ಟೌನ್ ನಿವಾಸಿ ನಯನ್ ದೀಪ್, ಗುಡ್ಡೆನಹಳ್ಳಿ ಗ್ರಾಮದ ಭರತ್ ಕುಮಾರ್, ಮಡಿಕೇರಿಯ ಕಡಗದಾಳು ಗ್ರಾಮದ ಜಂಶೀರ್, ಪಿರಿಯಾಪಟ್ಟಣ ತಾಲೂಕಿನ ಆಲನಹಳ್ಳಿ ಗ್ರಾಮದ ಅನಿಲ್ ಕುಮಾರ್ ಎಂಬುವರನ್ನು ಬಂಧಿಸಿ 29 ಕೆ.ಜಿ 103 ಗ್ರಾಂ ತೂಕದ ಗಾಂಜಾ ಸೊಪ್ಪು ಮತ್ತು ಸ್ವಿಫ್ಟ್ ಕಾರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೇಟಿ: ಬೈಲಕುಪ್ಪೆ ಆರಕ್ಷಕ ಠಾಣೆಗೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯಾಚರಣೆ ನಡೆಸಿದ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು, ಈ ವೇಳೆ ಮಾತನಾಡಿದ ಅವರು ಅಕ್ರಮ ಗಾಂಜಾ ಮಾರಾಟ ಹಾಗೂ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಆರಕ್ಷಕ ಇಲಾಖೆ ಸದಾ ಕಾರ್ಯೋನ್ಮುಖವಾಗಿದ್ದು ಸಾರ್ವಜನಿಕರು ಸಹ ಇಲಾಖೆ ಜೊತೆ ಕೈಜೋಡಿಸಿದರೆ ಅಪರಾಧಗಳನ್ನು ತಡೆಯುವಲ್ಲಿ ಯಶಸ್ವಿಯಾಗಬಹುದು, ತಮ್ಮ ಸುತ್ತಮುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದರೆ ಸಾರ್ವಜನಿಕರು ಶೀಘ್ರ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಮಾಹಿತಿದಾರರ ಹೆಸರನ್ನು ಬಹಿರಂಗಗೊಳಿಸದೆ ಅಪರಾಧಗಳನ್ನು ತಡೆಯಲು ಸಹಾಯವಾಗುತ್ತದೆ ಎಂದರು.