ಬೆಂಗಳೂರು: ಮಾಜಿ ಸಚಿವ ಆನಂದ್ ಸಿಂಗ್ ವಿರುದ್ಧದ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಅಂತಿಮ ತೀರ್ಪು ಫೆಬ್ರವರಿ 24ಕ್ಕೆ ಪ್ರಕಟವಾಗಲಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ಅಂತಿಮ ತೀರ್ಪು ಪ್ರಕಟಿಸುವ ದಿನಾಂಕವನ್ನು ಮುಂದೂಡಿದೆ. ನ್ಯಾ. ಸಂತೋಷ್ ಗಜಾನನ ಭಟ್ ಅವರ ಏಕಸದಸ್ಯ ಪೀಠ ಫೆಬ್ರವರಿ 24ಕ್ಕೆ ಅಂತಿಮ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.
ಮಾಜಿ ಸಚಿವ ಆನಂದ್ ಸಿಂಗ್ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಸಿ ವರದಿ ಆಧರಿಸಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ತನಿಖೆ ನಡೆಸಿತ್ತು. 16,976 ಮೆಟ್ರಿಕ್ ಟನ್ ಅದಿರು ಅಕ್ರಮ ಗಣಿಗಾರಿಕೆ ಆರೋಪದ ಜೊತೆಗೆ ಜೈಸಿಂಗ್‌ಪುರದ ಬಳಿ ಎಸ್‌ವಿಕೆ ಫ್ಲಾಟ್‌ನಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ 2015ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಡಿವೈಎಸ್ಪಿ ವೇಣುಗೋಪಾಲ್ ನೇತೃತ್ವದ ತಂಡ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ ವಿಚಾರಣೆ ಕಾಯ್ದಿರಿಸಿತ್ತು. ವಿಚಾರಣೆ ಮುಗಿಸಿರುವ ಕೋರ್ಟ್ ಅಂತಿಮ ತೀರ್ಪನ್ನು ಫೆಬ್ರವರಿ 24ಕ್ಕೆ ಪ್ರಕಟಿಸಲಿದೆ.