ಮೈಸೂರು : ಅಕ್ರಮ ನೇಮಕಾತಿ ಸಂಬಂಧ ಕಳೆದ ಹತ್ತಾರು ವರ್ಷಗಳಿಂದ ಸದಾ ಸುದ್ದಿಯಲ್ಲಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಖಾಯಂ ಶಿಕ್ಷಕೇತರ ನೌಕರರ ಸಂಘದಿಂದ ಕುಲಸಚಿವ ಕೆ.ಬಿ.ಪ್ರವೀಣ್ ಅವರ ಕಚೇರಿಗೆ ನೋಟಿನ ಹಾರ ಹಾಕಿ ಪ್ರತಿಭಟನೆ ನಡೆಸಲಾಯಿತು.
ಕುಲಸಚಿವರಾದ ಕೆ.ಬಿ.ಪ್ರವೀಣ್ ಅವರ ಕಚೇರಿ ಪ್ರವೇಶ ದ್ವಾರದಲ್ಲೆ ನೋಟಿನ ತೋರಣ ಕಟ್ಟಿದ ಪ್ರತಿಭಟನಾಕಾರರು, ಕರಾಮುವಿವಿಯಲ್ಲಿ ನಡೆಯುತ್ತಿರುವ ಹಣಕ್ಕಾಗಿ ಅಕ್ರಮ ನೇಮಕಾತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಕರಾಮುವಿವಿ ನಿರ್ವಹಣೆಗೆ ಅಧ್ಯಾಪಕರು ಮತ್ತು ಅಧ್ಯಾಪಕೇತರ ನೌಕರರು ಸೇರಿ ಕೇವಲ ಕೇವಲ ೬೫೦ ಜನ ಸಾಕಾಗಿದ್ದಾರೆ. ಆದರೆ ಇಲ್ಲಿ ಕುಲಸಚಿವರು ಮತ್ತು ಕುಲಪತಿಗಳು ಹಣದ ಆಸೆಗೆ ನೇಮಕಾತಿ ದಂಧೆ ನಡೆಸಿ ಸುಮಾರು ೧೬೦೦ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ.
ಎಲ್ಲರ ಸಂಬಳ ಮತ್ತಿತರ ಖರ್ಚುಗಳು ಸ್ವಯಂ ಹಣಕಾಸು ಯೋಜನೆ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಸಂಬಳ ಇತ್ಯಾದಿಗಳಿಗೆ ೯೦ಕೋಟಿ ರೂ ಅಗತ್ಯವಿದ್ದು, ಪ್ರವೇಶಾತಿಯಿಂದ ೪೫ಕೋಟಿ ಹಣ ಮಾತ್ರ ಬರುತ್ತದೆ. ಇವರು ಇದೇ ರೀತಿ ಅಕ್ರಮ ಮತ್ತು ಅನಗತ್ಯ ನೇಮಕಾತಿಗಳನ್ನು ಮಾಡುತ್ತಾ ಹೋದರೆ ಮುಂದೊಂದು ದಿನ ಖಾಯಂ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ಅಕ್ರಮ ನೇಮಕಾತಿಗಳನ್ನು ನಿಲ್ಲಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಕುಲಸಚಿವರು ಮತ್ತು ಕುಲಪತಿಗಳು ಅಕ್ರಮ ನೇಮಕಾತಿ ನಿಲ್ಲಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಿತಿಮೀರಿದ ಪ್ರಾದೇಶಿಕ ಕೇಂದ್ರಗಳು: ವಿಶ್ವವಿದ್ಯಾನಿಲಯದಲ್ಲಿ ನಿಯಮಬಾಹಿರವಾಗಿ ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಕೇವಲ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪ್ರಾದೇಶಿಕ ಕೇಂದ್ರಗಳನ್ನು ತೆರೆಯುವುದನ್ನು ಬಿಟ್ಟು ತಾಲ್ಲೂಕು ಮತ್ತು ಹೋಬಳಿಗಳಲ್ಲೂ ಪ್ರಾದೇಶಿಕ ಕೇಂದ್ರಗಳನ್ನು ತೆರೆದು ಅಲ್ಲಿ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕರಾಮುವಿವಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕರಾಮುವಿವಿಗೆ ಮಂಜೂರಾಗಿರುವ ಬೋಧಕ ಮತ್ತು ಬೋಧಕೇತರರ ಹುದ್ದೆಗಳನ್ನೂ ಮೀರಿ, ನಿಯಮಗಳನ್ನು ಉಲ್ಲಂಘಿಸಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳುತ್ತಿರುವ ಸಿಬ್ಬಂದಿಗಳ ನೇಮಕಾತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ವಿಶ್ವವಿದ್ಯಾನಿಲಯವು ಅಧಿಸೂಚಿಸುವ ಅಧ್ಯಯನ ಕೇಂದ್ರಗಳನ್ನು ಯುಜಿಸಿ ನಿಯಮವನ್ನು ಹಾಗೂ ಬೌಗೋಳಿಕವಾಗಿ ಕಾರ್ಯಸಾಧು ಅಂಶಗಳನ್ನು ಒಳಗೊಂಡಂತೆ ಸರ್ಕಾರಿ ಮತ್ತು
ಸರ್ಕಾರಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಿಗೆ ಸೀಮಿತಗೊಳಿಸುವುದು.
ವಿಶ್ವವಿದ್ಯಾನಿಲಯವು ಅಧಿಸೂಚಿಸುವ ಪರೀಕ್ಷಾ ಕೇಂದ್ರಗಳನ್ನು ವಿಶ್ವವಿದ್ಯಾನಿಲಯದ ಕೇಂದ್ರ ಕಛೇರಿಯಲ್ಲಿ, ಪ್ರಾದೇಶಿಕ ಕೇಂದ್ರಗಳಲ್ಲಿ, ಸರ್ಕಾರಿ ಮತ್ತು ಸರ್ಕಾರಿ ಕಾಲೇಜುಗಳಿಗೆ ಸೀಮಿತಗೊಳಿಸುವುದು ಹಾಗೂ ಯುಜಿಸಿ ನಿಯಮಗಳನ್ವಯವೇ ಕಡ್ಡಾಯವಾಗಿ ಪರೀಕ್ಷಾ ಪ್ರಕ್ರಿಯೆಗಳನ್ನು ನಡೆಸುವುದು.
ಅನುದಾನಿತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳನ್ನು ಜಿಲ್ಲಾ ಕೇಂದ್ರಗಳ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸುವುದು ಹಾಗೂ ಹಾಲಿ ತಾಲ್ಲೂಕು ಮತ್ತು ಗ್ರಾಮಗಳ ಮಟ್ಟದಲ್ಲಿ ಪ್ರಾರಂಭಿಸಿರುವ ಪ್ರಾದೇಶಿಕ ಕೇಂದ್ರಗಳನ್ನು ಕೂಡಲೇ ಮುಚ್ಚಲು ಕ್ರಮವಹಿಸುವುದು.
ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳಿಗೆ ಸೀಮಿತವಾದಂತೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿರುವ ಎಲ್ಲಾ ಪ್ರಾದೇಶಿಕ ನಿರ್ದೇಶಕರುಗಳನ್ನು ಪ್ರಾದೇಶಿಕ ಕೇಂದ್ರಗಳಲ್ಲೇ ಕರ್ತವ್ಯ ನಿರ್ವಹಿಸಲು ಆದೇಶಿಸುವುದು ಮತ್ತು ಹಾಲಿ ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾದೇಶಿಕ ನಿರ್ದೇಶಕರುಗಳಿಗೆ ಪ್ರಾದೇಶಿಕ ಕೇಂದ್ರಗಳಲ್ಲೇ ಕರ್ತವ್ಯ ನಿರ್ವಹಿಸಲು ಆದೇಶಿಸುವುದು, ಪ್ರಸ್ತುತ ಜಿಲ್ಲಾ ವ್ಯಾಪ್ತಿಗೆ ಅನುಗುಣವಾಗಿ ಸ್ಥಾಪಿಸಲಾಗಿರುವ ಪ್ರಾದೇಶಿಕ ಕೇಂದ್ರಗಳಿಗೂ ಮೀರಿ ಅಧಿಕವಾಗಿ ನೇಮಕ ಮಾಡಿಕೊಂಡಿರುವ ತಾತ್ಕಾಲಿಕ ಪ್ರಾದೇಶಿಕ ನಿರ್ದೇಶಕರುಗಳನ್ನು ಕೂಡಲೇ ವಿಶ್ವವಿದ್ಯಾನಿಲಯದ ಸೇವೆಯಿಂದ ಬಿಡುಗಡೆಗೊಳಿಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.