ಮಂಗಳೂರು : ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ ಶೈಕ್ಷಣಿಕ ಕಾರ್ಯಗಾರವು ಡಾ.ಎ.ವಿ.ರಾವ್ ಸಭಾಂಗಣದಲ್ಲಿ ( ಮಾ.೬) ನೇತೃತ್ವದಲ್ಲಿ ಜರಗಿತು.
ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿ ಡಾ.ಅನಿಮೇಶ್ ಜೈನ್ ಸಂಪಾದಕತ್ವದ ಸಂಘದ ವಾರ್ತಾಗೃಹ ಪತ್ರಿಕೆ “ಮೆಡಿಲೋರ್’ನ್ನು ಅನಾವರಣಗೊಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ನಗರದ ಎ.ಜೆ.ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ತಜ್ಞ ಡಾ.ರಾಘವೇಂದ್ರ ನಾಯಕ್ರವರು ಮೂತ್ರ ಪಿಂಡ ಮತ್ತು ಹೃದ್ರೋಗ ಶಾಸ್ತ್ರದಲ್ಲಿ ಇತ್ತೀಚಿಗಿನ ಬೆಳವಣಿಗೆಗಳು, ಪರಿಕಲ್ಪನೆಗಳು ಮತ್ತು ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞ ಡಾ.ಪ್ರದೀಪ್ ಪಿರೇರಾರವರು ಹೃದಯ ಆಘಾತ, ವೈಪಲ್ಯ ಸಂದರ್ಭದಲ್ಲಿ ತುರ್ತು ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು.
ಮುಂಬಯಿ ನಗರದ ಹಿಂದುಜಾ ಆಸ್ಪತ್ರೆಯ ಅರ್ಬುದಾ ರೋಗ ಶಸ್ತ್ರ ಚಿಕಿತ್ಸಕ ಡಾ.ಮುರದ ಲಾಲ ಅವರು ತಮ್ಮ ಹವ್ಯಾಸಿ ಸಾಹಸಮಯ ವೃತ್ತಿಯ ಅಂಗವಾಗಿ ೪೨ ದಿನ ಅವಧಿಯ ಅದ್ಭುತ ೨೯೦೦೦ ಅಡಿ ವಿಶ್ವದ ಅತಿ ಎತ್ತರದ ಮೌಂಟ್ ಎವೆರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಪರ್ವತಾರೋಹಣದ ಬಗ್ಗೆ ಮಾತನಾಡಿದರು. ಹಾಗೂ ಈ ಸಂದರ್ಭದಲ್ಲಿ ಎದುರಿಸಿದ ಭಯಾನಕ ಸಮಸ್ಯೆ ಗಂಭೀರ ಸನ್ನಿವೇಶವನ್ನು ಸಾಕ್ಷ್ಯಧಾರಿತ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದ ಮೂಲಕ ಉಪನ್ಯಾಸ ನೀಡಿದರು.
ಸಂಘದ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಸ್ವಾಗತಿಸಿ ಈ ಶೈಕ್ಷಣಿಕ ಕಾರ್ಯಗಾರವನ್ನು ಸಂಸ್ಥೆಯ ಸದಸ್ಯರ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಡಾ.ಜುಲಿಯನ್ ಸಲ್ದಾನ ಉಪಸ್ಥಿತರಿದ್ದರು. ನಗರದ ರೆಡ್ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಗೆ ಆಯ್ಕೆಯಾದ ಡಾ.ಸತೀಶ್ ರಾವ್ ಅವರನ್ನು ಅಭಿನಂದಿಸಲಾಯಿತು. ಸಂಘದ ಚುನಾಯಿತ ಅಧ್ಯಕ್ಷ ಡಾ.ಉಲ್ಲಾಸ್ ಶೆಟ್ಟಿ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾ.ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.



